Bengaluru: ಇನ್ನೇನು ಕೆಲವೇ ದಿನಗಳಲ್ಲಿ ಪರೀಕ್ಷೆ ಎದುರಿಸಲಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಸಿಹಿ ಸುದ್ದಿ ನೀಡಿದೆ. ಮಹಾನಗರದಲ್ಲಿ ದ್ವಿತೀಯ ಪಿಯುಸಿ (Second PUC) ಕಲಿಯುತ್ತಿರುವ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಗೆ (PUC Exam 2024) ತೆರಳಲು ಅನುಕೂಲವಾಗುವಂತೆ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಿದೆ. ಜೊತೆಗೆ ಕೋರಿಕೆ ನಿಲುಗಡೆಯನ್ನು ಕಲ್ಪಿಸಲು ಬಿಎಂಟಿಸಿ (BMTC) ಸೂಚನೆ ನೀಡಿದೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಈ ಸೇವೆಯನ್ನು ಪರೀಕ್ಷೆ ನಡೆಯುವ ದಿನಾಂಕದಲ್ಲಿ ಪಡೆಯಬಹುದಾಗಿದೆ. ಮಾರ್ಚ್ (March) 1 ರಿಂದ ಮಾರ್ಚ್ 22ರ ವರೆಗೆ ಈ ಉಚಿತ ಪ್ರಯಾಣದ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಲಾಗಿದೆ. ಪರೀಕ್ಷಾ ದಿನಾಂಕದಂದು ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ಬಿಎಂಟಿಸಿಯ (BMTC) ಉಚಿತ ಸೇವೆಯ ಪ್ರಯೋಜನ ಪಡೆಯಬಹುದಾಗಿದೆ.
ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ತಮ್ಮ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಪ್ರವೇಶ ಪತ್ರವನ್ನು ತೋರಿಸಿ ಪ್ರಯಾಣವನ್ನು ಮಾಡಬಹುದಾಗಿದೆ. ಅಷ್ಟೇ ಅಲ್ಲ, ತಮ್ಮ ಪರೀಕ್ಷಾ ಕೇಂದ್ರದ ಮುಂಭಾಗದಲ್ಲಿ ಕೋರಿಕೆಯ ನಿಲುಗಡೆಯನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ ಎಂದು ಬಿಎಂಟಿಸಿ ತನ್ನ ಅಧಿಕೃತ ಟ್ವಿಟ್ಟರ್ (X ಖಾತೆ) ಖಾತೆಯಲ್ಲಿ ತಿಳಿಸಿದೆ.
ಸಾಮಾನ್ಯವಾಗಿ ಪ್ರತಿ ವರ್ಷವೂ ಸಹ ಕೆಎಸ್ಆರ್ಟಿಸಿ (KSRTC) ಹಾಗೂ ಬಿಎಂಟಿಸಿ (BMTC) ಸಂಸ್ಥೆಗಳು ಎಸ್ಎಸ್ಎಲ್ಸಿ (SSLC) ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಸೇವೆ ನೀಡುತ್ತಾ ಬಂದಿವೆ. ಸದ್ಯಕ್ಕೆ ಬೆಂಗಳೂರಿನ ವಿದ್ಯಾರ್ಥಿಗಳಿಗಾಗಿ ಉಚಿತ ಸೇವೆಯನ್ನು ಬಿಎಂಟಿಸಿ ಘೋಷಣೆ ಮಾಡಿದ್ದು, ಇನ್ನೂ ಇನ್ನುಳಿದ ಜಿಲ್ಲೆಗಳಿಗೆ ಕೆಎಸ್ಆರ್ಟಿಸಿ ಈ ಬಗ್ಗೆ ಇನ್ನೂ ಯಾವುದೇ ಸುತ್ತೋಲೆ ಹೊರಡಿಸಿಲ್ಲ.