ಹಾನಗಲ್ ಉಪಚುನಾವಣೆ ದಿನಾಂಕ ನಿಗದಿಗೂ ಮೊದಲೇ ಅಭ್ಯರ್ಥಿ ಘೋಷಣೆ: ಅಚ್ಚರಿಗೆ ಕಾರಣವಾಯ್ತು ಜೆಡಿಎಸ್ ವರಿಷ್ಠರ ನಡೆ

ಬೆಂಗಳೂರು,ಜೂ.16: ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲು ಜೆಡಿಎಸ್ ನಾಯಕರು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಈಗಾಗಲೇ ತಯಾರಿ ಆರಂಭಿಸಿರುವ ವರಿಷ್ಠರು, ಉಪ ಚುನಾವಣೆ ಘೋಷಣೆ ಆಗುವ ಮೊದಲೇ ಹಾನಗಲ್ ಉಪಚುನಾವಣೆಗೆ ಅಭ್ಯರ್ಥಿ ಘೋಷಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇತ್ತೀಚೆಗಷ್ಟೇ ಜೆಡಿಎಸ್​ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರ್ಪಡನೆಯಾದ ನಿಯಾಜ್​ ಖಾನ್​ ಅವರನ್ನೇ ಚುನಾವಣಾ ಕಣಕ್ಕೆ ಇಳಿಸಲು ಜೆಡಿಎಸ್​ ನಿರ್ಧರಿಸಿದೆ. ಹಾವೇರಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್​ ಸಮಿತಿ ಅಧ್ಯಕ್ಷರಾಗಿದ್ದ ನಿಯಾಜ್​ ಶೇಖ್​ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.

ಅನಾರೋಗ್ಯದಿಂದ ಕಳೆದ ವಾರ ಸಾವನ್ನಪ್ಪಿದ್ದ ಸಿಎಂ ಉದಾಸಿ ಅವರ ನಿಧಾನದಿಂದ ಹಾನಗಲ್ ಕ್ಷೇತ್ರ ಮತ್ತೊಮ್ಮೆ ಚುನಾವಣೆ ನಡೆಯಲಿದೆ. ಆದರೆ ಉಪ ಚುನಾವಣೆ ದಿನಾಂಕ ಘೋಷಣೆ ಆಗುವ ಮುನ್ನವೇ ಅಭ್ಯರ್ಥಿ ಘೋಷಣೆ ಮಾಡುವ ಮೂಲಕ ಜೆಡಿಎಸ್ ವರಿಷ್ಠರು, ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಪಕ್ಷ ಸಂಘಟನೆಗೆ ಒತ್ತು: ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿ, ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಿರುವ ಜೆಡಿಎಸ್ ವರಿಷ್ಠರು, ಉಪ ಚುನಾವಣೆಗೂ ಮೊದಲೇ ಅಭ್ಯರ್ಥಿ ಘೋಷಣೆ ಮಾಡುವ ನಿರ್ಧಾರ ಮಾಡಿದಂತಿದೆ. ಆ ಮೂಲಕ ಮುಂಬರುವ ಉಪ‌ ಚುನಾವಣೆಯಲ್ಲಿ ಮತದಾರರ ಮನವೊಲಿಸುವ ರಣತಂತ್ರ ರೂಪಿಸಿದೆ. ಕಣಕ್ಕಿಳಿಯಲಿರುವ ಅಭ್ಯರ್ಥಿ ಕ್ಷೇತ್ರದ ಮತದಾರರ ಗಮನ ಸೆಳೆಯಲು ಹೆಚ್ಚಿನ ಸಮಯಾವಕಾಶ ನೀಡಲಾಗಿದೆ.

ಆಕಾಂಕ್ಷಿಗಳಿಗೆ ಶಾಕ್:
ಮಾಜಿ ಸಚಿವ ಸಿಎಂ ಉದಾಸಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆಯಲಿರುವ ಉಪ ಚುನಾವಣೆ ಘೋಷಣೆಗೂ ಮೊದಲೇ ಅಭ್ಯರ್ಥಿ ಘೋಷಣೆ ಮಾಡಿರುವ ಜೆಡಿಎಸ್ ವರಿಷ್ಠರು, ಕೊನೆ ಕ್ಷಣದಲ್ಲಿ ಎದುರಾಗಬಹುದಾದ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ವರಿಷ್ಠರ ಈ ನಿರ್ಧಾರ ಟಿಕೆಟ್ ಆಕಾಂಕ್ಷಿಗಳಿಗೆ ಶಾಕ್ ನೀಡಿದೆ.‌

ಪ್ರಮುಖವಾಗಿ ಇತ್ತೀಚೆಗಷ್ಟೇ ಪಕ್ಷ ಸೇರ್ಪಡೆಗೊಂಡವರಿಗೆ ಉಪ ಚುನಾವಣೆ ಟಿಕೆಟ್ ನೀಡುವ ಘೋಷಣೆ ಮಾಡಿರುವುದು ಸ್ಥಳೀಯವಾಗಿ ಪಕ್ಷ ಸಂಘಟನೆ ಮಾಡುತ್ತಿರುವ ಹಾಗೂ ಟಿಕೆಟ್ ನಿರೀಕ್ಷೆ ಹೊಂದಿರುವ ಆಕಾಂಕ್ಷಿಗಳಲ್ಲಿ ಅಸಮಾಧಾನ ಮೂಡಿಸುವ ಸಾಧ್ಯತೆ ಸಹ ಹೆಚ್ಚಾಗಲಿದೆ.‌ ಈ ನಿಟ್ಟಿನಲ್ಲಿ ಉಪ ಚುನಾವಣೆ ಹೊಸ್ತಿಲಲ್ಲಿ ಎದುರಾಗಲಿರುವ ಆಂತರಿಕ ಮನಸ್ಥಾಪಕ್ಕೆ ಜೆಡಿಎಸ್ ವರಿಷ್ಠರು ಯಾವ ರೀತಿಯ ಪರಿಹಾರ ಹುಡುಕುತ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

Exit mobile version