ಬಿಪಿ, ಮದುಮೇಹ ಸೇರಿದಂತೆ ಅನೇಕ ಖಾಯಿಲೆಗಳಿಗೆ ರಾಮಬಾಣ ನೇರಳೆ ಹಣ್ಣು ; ಓದಿ ಈ ಉಪಯುಕ್ತ ಮಾಹಿತಿ

Fruit

ಗೋಲಿಯಾಕಾರದ ಈ ಜಂಬೂ ಫಲ(Black Jamun Fruit) ತನ್ನೊಳಗೆ ಹತ್ತು ಹಲವು ಆರೋಗ್ಯ ಪೂರಕ ಅಂಶಗಳನ್ನು ಅಡಕವಾಗಿಸಿಕೊಂಡಿದೆ. ಪ್ರೋಟೀನ್, ವಿಟಮಿನ್, ಆ್ಯಂಟಿ ಆಕ್ಸಿಡೆಂಟ್‌ಗಳು, ಮ್ಯಾಂಗನೀಸ್, ಪೋಟ್ಯಾಶಿಯಂ, ಕ್ಯಾಲ್ಸಿಯಂ ಸೇರಿ ಅಪಾರ ಪೋಷಕಾಂಶಗಳನ್ನು ಹೊಂದಿರುವ ನೇರಳೆ ಹಣ್ಣು, ರೋಗ ನಿರೋಧಕವಾಗಿಯೂ ಕೆಲಸ ಮಾಡುತ್ತದೆ.

ಮಧುಮೇಹ, ಹೃದಯದ ಕಾಯಿಲೆ, ಸಂಧಿವಾತ, ಹೊಟ್ಟೆಯ ಖಾಯಿಲೆಗಳ ನಿಯಂತ್ರಣ ಮತ್ತು ನಿವಾರಣೆಗೂ ಇದು ರಾಮಬಾಣ ಎನ್ನುತ್ತದೆ ಆಯುರ್ವೇದ(Ayurveda). ನೇರಳೆ ಹಣ್ಣು ಒಂದು ಸೀಸನಲ್‌ ಹಣ್ಣಾಗಿರುವುದರಿಂದ, ಬೇಸಿಗೆಯಲ್ಲಿ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಕಾಣಸಿಗುತ್ತದೆ. ಇದನ್ನು ಜಾಮೂನ್ ಎಂದೂ ಕರೆಯುತ್ತಾರೆ. ಈ ಹಣ್ಣು, ಅದರ ಗಾಢ ಬಣ್ಣ ಮತ್ತು ಹುಳಿ ಸಿಹಿ ರುಚಿಯಿಂದಾಗಿ ತುಂಬಾ ಜನರು ಇದನ್ನು ಇಷ್ಟಪಡುತ್ತಾರೆ.


ಆಯುರ್ವೇದ ವೈದ್ಯರು ನೇರಳೆ ಹಣ್ಣಿನ ಆಯುರ್ವೇದ ಗುಣಲಕ್ಷಣಗಳನ್ನು ಮತ್ತು ಅದನ್ನು ತಿನ್ನುವ ಪ್ರಯೋಜನಗಳನ್ನು ಹಂಚಿಕೊಂಡಿದ್ದಾರೆ. ಐಬಿಎಸ್, ಅತಿಸಾರ, ಅತಿಯಾದ ರಕ್ತಸ್ರಾವ, ಲ್ಯುಕೋರಿಯಾ, ವಾಕರಿಕೆ ಮತ್ತು ವಾಂತಿ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ನೇರಳೆ ಹಣ್ಣು ಅಮೃತವಾಗಿದೆ. ಇದರ ಗುಣ ಲಕ್ಷಣಗಳು ಹೃದಯದ ಆರೋಗ್ಯಕ್ಕೂ ಒಳ್ಳೆಯದು ಜೊತೆಗೆ ಮಧುಮೇಹಿಗಳಿಗೂ ಈ ಹಣ್ಣು ಬಹಳ ಪ್ರಯೋಜನಕಾರಿಯಾಗಿದೆ.

ನೇರಳೆ ಹಣ್ಣಿನ ಪ್ರಯೋಜನಗಳ ಬಗ್ಗೆ ತಿಳಿದ ನಂತರ ಅನೇಕ ಜನರು ಅದನ್ನು ಅತಿಯಾಗಿ ಸೇವಿಸಲು ಪ್ರಾರಂಭಿಸುತ್ತಾರೆ. ಆದರೆ ಹಾಗೆ ಮಾಡುವುದು ಕೂಡ ಅಪಾಯಕಾರಿಯಾಗಬಹುದು. ನೇರಳೆ ಹಣ್ಣನ್ನು ಮಾತ್ರವಲ್ಲದೆ ಅದರ ಬೀಜಗಳು, ತೊಗಟೆ ಮತ್ತು ಎಲೆಗಳನ್ನು ವಿವಿಧ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇಡೀ ದೇಹದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಫ್ಲೇವನಾಯ್ಡ್‌ಗಳ ಜೊತೆಗೆ ನೇರಳೆ ಹಣ್ಣು ಉತ್ಕರ್ಷಣ ನಿರೋಧಕಗಳ ಶ್ರೀಮಂತ ಮೂಲವಾಗಿದೆ.


ಆಯುರ್ವೇದದಲ್ಲಿ, ನೇರಳೆ ಹಣ್ಣಿನ ಸೇವನೆಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ಗಮನ ಹರಿಸಲು ಸಲಹೆ ನೀಡಲಾಗಿದೆ. ಆಯುರ್ವೇದದ ಪ್ರಕಾರ ಜಾಮೂನ್ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಇದಲ್ಲದೆ, ಈ ಹಣ್ಣನ್ನು ತಿಂದ ನಂತರ ಮತ್ತು ಮೊದಲು ಕನಿಷ್ಠ ಒಂದು ಗಂಟೆಯವರೆಗೆ ಹಾಲನ್ನು ಕುಡಿಯಬಾರದು. ಒಂದು ವೇಳೆ ಹಾಗೆ ಮಾಡಿದರೆ ಪ್ರಯೋಜನಗಳ ಬದಲಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.


ನೇರಳೆ ಹಣ್ಣು ವಿಟಮಿನ್ ‘ಎ’ ಮತ್ತು ‘ಸಿ’ ಯ ಉತ್ತಮ ಮೂಲವಾಗಿದೆ, ಇದು ಕಣ್ಣು(Eyes) ಮತ್ತು ಚರ್ಮದ(Skin) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರೊಂದಿಗೆ, ಹೊಳೆಯುವ ಚರ್ಮಕ್ಕಾಗಿ ಮತ್ತು ಮೊಡವೆಗಳನ್ನು ಮೂಲದಿಂದ ತೆಗೆದುಹಾಕಲು ಸಹ ನೇರಳೆ ಹಣ್ಣು ಸಹಕಾರಿ. ಆದರೆ ಅತೀ ಹೆಚ್ಚು ನೇರಳೆ ಹಣ್ಣನ್ನು ಸೇವಿಸಿದರೆ ಅದು ನಿಮ್ಮ ತ್ವಚೆಗೆ ಸಮಸ್ಯೆಗಳನ್ನು ಉಂಟು ಮಾಡಬಹುದು.


ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ, ಅಂತ ನೀವು ಸಿಕ್ಕಾಪಟ್ಟೆ ತಿಂದರೆ ಮಲಬದ್ಧತೆ ಸಮಸ್ಯೆ ಕಾಡಬಹುದು. ಹಾಗಾಗಿ ಸ್ವಲ್ಪ ಪ್ರಮಾಣದಲ್ಲಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆಯುರ್ವೇದದ ಪ್ರಕಾರ, ಅಧಿಕ ರಕ್ತದೊತ್ತಡ ರೋಗಿಗಳಿಗೆ ನೇರಳೆ ಹಣ್ಣಿನ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಈ ಹಣ್ಣನ್ನು ಆಹಾರದಲ್ಲಿ ಸೇರಿಸುವುದರಿಂದ ಬಿಪಿಯನ್ನು ಸುಲಭವಾಗಿ ನಿಯಂತ್ರಿಸಬಹುದು.

ಆದರೆ ಅನೇಕ ಜನರು ಬಿಪಿ ನಿಯಂತ್ರಣಕ್ಕೆ ಇದನ್ನು ಹೆಚ್ಚು ಸೇವಿಸಲು ಪ್ರಾರಂಭಿಸುತ್ತಾರೆ, ಇದರಿಂದಾಗಿ ಕಡಿಮೆ ರಕ್ತದೊತ್ತಡದ ಸಮಸ್ಯೆ ಬರಬಹುದು. ಹಾಗಾಗಿ ಹಿತ ಮಿತವಾಗಿ ಇದನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ.

Exit mobile version