ಸಿಹಿ ತಿಂಡಿ ತಿಂದ ತಕ್ಷಣ ಹಲ್ಲುಜ್ಜುತ್ತಿರಾ? ಹಾಗಾದ್ರೆ ತಪ್ಪದೇ ಈ ಮಾಹಿತಿ ತಿಳಿಯಿರಿ!

ಏನಾದ್ರೂ ಸಿಹಿ ಪದಾರ್ಥ ತಿಂದ ತಕ್ಷಣ ಹಲ್ಲುಜ್ಜಿದರೆ ಹಲ್ಲು(Teeth) ಹಾಳಾಗುವುದನ್ನು ತಪ್ಪಿಸಬಹುದು ಎನ್ನುವ ನಂಬಿಕೆ ನಮ್ಮಲ್ಲಿದೆ. ಆದರೆ ಇದು ತಪ್ಪು, ಏನಾದರೂ ತಿಂದ ಕೂಡಲೇ ಬ್ರಶ್ ಮಾಡುವುದರಿಂದ ಹಲ್ಲು ದುರ್ಬಲವಾಗುತ್ತವೆ. ಏಕೆಂದರೆ ಹಲ್ಲುಗಳ ಮೇಲೆ ಆ್ಯಸಿಡ್ ದಾಳಿ ನಡೆಯುವ ಹೊತ್ತದು. ಹಲ್ಲಿನ ಮೇಲೂ ಆ್ಯಸಿಡ್ ದಾಳಿ ನಡೆಯುತ್ತದೆ ಎನ್ನುವುದು ಆಶ್ಚರ್ಯಕರ ವಿಷಯವಾದರೂ, ಇದು ಸತ್ಯ.


ಹೌದು, ಬಿಳಿ ಬಣ್ಣದ ಪುಟ್ಟ ಪುಟ್ಟ ಹಲ್ಲುಗಳು ವಿವಿಧ ಪದರಗಳಿಂದ ಕೂಡಿವೆ. ಹೊರಗೆ ಕಾಣುವ ಬಿಳಿ ಕವಚವೇ ಎನಾಮಲ್, ನಮ್ಮ ದೇಹದ ಅತ್ಯಂತ ಗಟ್ಟಿಯಾದ ವಸ್ತು ಈ ಎನಾಮಲ್, ಇದು ಎಷ್ಟು ಗಟ್ಟಿ ಎಂದರೆ ಮೂಳೆಗಿಂತಲೂ ಬಲಶಾಲಿ! ಹಾಗಾಗಿಯೇ ಒಳಗಿರುವ ಮೃದು ಪದರಗಳನ್ನು ಹೊರಗಿನ ವಾತಾವರಣದಿಂದ ರಕ್ಷಿಸುತ್ತದೆ. ಆದರೆ ಈ ಎನಾಮೆಲ್ ಅನ್ನೂ ಕರಗಿಸುವ ಶಕ್ತಿ ಹೊಂದಿರುವ ವಸ್ತು ಆ್ಯಸಿಡ್ ಅಥವಾ ಆಮ್ಲ. ಸಾಮಾನ್ಯವಾಗಿ ಸ್ವಚ್ಛ, ಆರೋಗ್ಯಕರ ಬಾಯಲ್ಲಿ ಆಮ್ಲ-ಪ್ರತ್ಯಾಮ್ಲದ ಸಮತೋಲನ ಅಂಶವಾದ ಪಿ.ಹೆಚ್ ಮಟ್ಟ 7 ಇರಬೇಕು.

ಆದರೆ ಬಾಯಿಯಲ್ಲಿ ಪಿ.ಹೆಚ್ ಮಟ್ಟ ಕುಸಿದಾಗ, ಎಂದರೆ ಸಿಹಿ, ಅಂಟು, ಸಕ್ಕರೆ ಅಂಶ, ಆಮ್ಲ ಪದಾರ್ಥಗಳ ಅಂಶ ಹೆಚ್ಚಾದಾಗ ಆಮ್ಲೀಯ ಗುಣ ಹೆಚ್ಚುತ್ತದೆ. ಆಹಾರ ಅಥವಾ ಪಾನೀಯದಲ್ಲಿನ ಸಕ್ಕರೆ, ಪಿಷ್ಟ ಎರಡೂ ಸೂಕ್ಷ್ಮಾಣು ಜೀವಿಗಳಿಂದ ಉಪಯೋಗಿಸಲ್ಪಟ್ಟು ಆಮ್ಲ ಉತ್ಪತ್ತಿಯಾಗುತ್ತದೆ. ಉತ್ಪತ್ತಿಯಾದ ಆಮ್ಲ ಅಥವಾ ಆ್ಯಸಿಡ್ ಹಲ್ಲಿನ ಮೇಲೆ ದಾಳಿ ನಡೆಸುತ್ತದೆ. ಆಗ ಹಲ್ಲಿನಲ್ಲಿ ವಿಖನಿಜೀಕರಣ ಕ್ರಿಯೆ ಎಂದರೆ ಡಿಮಿನೆರಲೈಜೇಶನ್ ಆರಂಭವಾಗುತ್ತದೆ. ಅಂದರೆ ಹಲ್ಲಿಗೆ ಬಲ ನೀಡುವ ಕ್ಯಾಲ್ಶಿಯಮ್‌ನಂಥ ಖನಿಜಗಳನ್ನು ಕರಗಿಸಿ ದುರ್ಬಲವಾಗಿಸುತ್ತದೆ. ಇದರಿಂದಾಗಿ ಹಲ್ಲುಗಳಲ್ಲಿ ಸೂಕ್ಷ್ಮವಾದ ಗೀರು, ರಂಧ್ರಗಳಾಗುತ್ತವೆ.

ಬಾಯಿಯಲ್ಲಿರುವ ಸೂಕ್ಷ್ಮಾಣುಜೀವಿಗಳಿಗೆ ಇವುಗಳ ಮೂಲಕ ಹಲ್ಲಿನ ಒಳ ಪದರಗಳಿಗೆ ಪ್ರವೇಶ ಸಿಕ್ಕು ಹುಳುಕು ಆರಂಭವಾಗುತ್ತದೆ. ಉದಾಹರಣೆಗೆ, ಒಂದು ಬಾರಿ ತಂಪು ಪಾನೀಯ ಕುಡಿದ ನಂತರ ಸುಮಾರು ಇಪ್ಪತ್ತು ನಿಮಿಷಗಳಷ್ಟು ಕಾಲ ಹಲ್ಲುಗಳ ಮೇಲೆ ಆ್ಯಸಿಡ್ ದಾಳಿ ನಡೆಯುತ್ತದೆ. ಅಷ್ಟೇ ಅಲ್ಲ ಹುಳಿ ಹಣ್ಣುಗಳು, ಸೋಡಾ ಇರುವ ಪಾನೀಯಗಳು, ಸಕ್ಕರೆ ಅಧಿಕವಿರುವ ಆಹಾರವನ್ನು ತಿಂದಾಗ ಈ ಪ್ರಕ್ರಿಯೆ ನಡೆದು ಹಲ್ಲು ಹಾಳಾಗುತ್ತದೆ. ಆದ್ದರಿಂದ, ಆಹಾರ ಸೇವನೆಯ ಸುಮಾರು ಮೂವತ್ತು ನಿಮಿಷದ ನಂತರ ಹಲ್ಲನ್ನು, ಬ್ರಶ್ ಉಪಯೋಗಿಸಿ ಉಜ್ಜುವುದು ಒಳ್ಳೆಯದು ಮತ್ತು ಸುರಕ್ಷಿತ.

ಇದರೊಂದಿಗೇ ನೆನಪಿನಲ್ಲಿಡಬೇಕಾದ ಬಹು ಮುಖ್ಯ ಅಂಶವೆಂದರೆ ತಂಪು ಪಾನೀಯಗಳು, ಸಂಸ್ಕರಿಸಿದ ಆಹಾರ, ಅಂಟುವ ಸಿಹಿ ಪದಾರ್ಥ ಇವುಗಳ ಸೇವನೆ ಮಿತಿಯಲ್ಲಿರಲಿ. ಜಂಕ್‌ಫುಡ್ ಬಾಯಿಗೆ ರುಚಿಕರವಾದರೂ ಹಲ್ಲಿಗೆ ಹಾನಿಕರ. ಜೊತೆಗೆ ಹಲ್ಲುಜ್ಜಲು ಬಳಸುವ ಬ್ರಷ್ ಬಹಳ ಗಡುಸಾಗಿರುವುದು ಹಲ್ಲಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

Exit mobile version