ಮಹಿಳೆಯರು ಈ ಅರೋಗ್ಯ ಸಮಸ್ಯೆಗಳನ್ನು ಕಡೆಗಣಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ!

ಮನೆಯ ಸಮಸ್ತ ಕಾರ್ಯಗಳನ್ನು ನಿಭಾಯಿಸುವವರು ಹೆಣ್ಣುಮಕ್ಕಳು. ಭೂಮಿಯ ಮೇಲಿನ ಸಕಲ ಜೀವರಾಶಿಗಳಲ್ಲಿ, ಹೊಸ ಜೀವಕ್ಕೆ (health tips for women) ಜನ್ಮ ನೀಡುವಂತಹ ಅದ್ಭುತ ಶಕ್ತಿ ಇರುವುದು ಹೆಣ್ಣಿಗೆ ಮಾತ್ರ.

ಮನೆಯಲ್ಲಿರುವ ಮಹಿಳೆಯರ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಸಮಾಜದ ಏಳಿಗೆ ಸಾಧ್ಯವಾಗುತ್ತದೆ. ಹಾಗಾಗಿ, ಹೆಣ್ಣುಮಕ್ಕಳು ತಮ್ಮ ಆರೋಗ್ಯದ ಏರುಪೇರುಗಳನ್ನು ಕನಿಷ್ಟವಾಗಿ ಪರಿಗಣಿಸದೆ, ಸೂಕ್ತ ಚಿಕಿತ್ಸೆ ಪಡೆದಲ್ಲಿ ಮನೆ ಹಾಗೂ ಸಮಾಜ ಸ್ವಸ್ಥವಾಗಿರುತ್ತದೆ.

ಹೊಟ್ಟೆನೋವು: ಸಾಮಾನ್ಯವಾಗಿ, ಹೆಣ್ಣುಮಕ್ಕಳಲ್ಲಿ ಅನೇಕ ಕಾರಣಗಳಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅದರಲ್ಲಿಯೂ 16 ರಿಂದ 40 ವರ್ಷದ ಮಹಿಳೆಯರಲ್ಲಿ ಹೊಟ್ಟೆ ನೋವು ಅಧಿಕವಾಗಿರುತ್ತದೆ.

ಈ ನೋವು, ಮುಟ್ಟಿನ ದಿನಗಳಲ್ಲಿರಬಹುದು, ಗರ್ಭಪಾತದ ಸಮಯದಲ್ಲಿ, ಹೀಗೆ ಹಲವು ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಟೊರ್ಷನ್‌ ಓವರಿ: ಕೆಲವು ಮಹಿಳೆಯರಲ್ಲಿ ಟೊರ್ಷನ್‌ ಓವರಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯಲ್ಲಿ, ಅಂಡಾಶಯಕ್ಕೆ ರಕ್ತದ ಹರಿವು ಕಡಿಮೆಯಾಗುತ್ತದೆ.

ಈ ರೋಗಲಕ್ಷಣ ಎಂದರೆ, ಸಾಮಾನ್ಯವಾಗಿ ಒಂದು ಬದಿಯಲ್ಲಿ ಶ್ರೋಣಿಯ ನೋವನ್ನು ಒಳಗೊಂಡಿರುತ್ತವೆ. ಈ ಸಮಸ್ಯೆ ಕೊಂಚ ಹೆಚ್ಚೇ ಅಪಾಯಕಾರಿಯಾಗಿದೆ.

ಎಕ್ಟೋಪಿಕ್ ಗರ್ಭಧಾರಣೆ: ಅಪರೂಪಕ್ಕೆ ಮಹಿಳೆಯರಲ್ಲಿ (health tips for women) ಇಂತಹ ಗರ್ಭಧಾರಣೆ ಕಂಡುಬರುತ್ತದೆ. ಈ ಸಮಸ್ಯೆಯಲ್ಲಿ, ಭ್ರೂಣವು ಗರ್ಭಕೋಶದ ಬದಲು ಗರ್ಭನಾಳದಲ್ಲಿ ಬೆಳೆಯುತ್ತದೆ. ಇದು ತಾಯಿಯ ಜೀವಕ್ಕೆ ಕುತ್ತು ತರುವ ಸಾಧ್ಯತೆ ಹೆಚ್ಚು.

ಹಾಗಾಗಿ, ಗರ್ಭಧಾರಣೆ ಸಂದರ್ಭದಲ್ಲಿ ಹೆಚ್ಚು ನಿಗಾವಹಿಸುವುದು ಅಗತ್ಯವಾಗಿರುತ್ತದೆ. ಒಂದುವೇಳೆ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುತ್ತಿದ್ದರೆ, ಈ ರೀತಿ ಎಕ್ಟೋಪಿಕ್ ಗರ್ಭಧಾರಣೆಯ ಸಾಧ್ಯತೆ ಹೆಚ್ಚಾಗಿರುತ್ತದೆ.

ಗರ್ಭಾಶಯದ ಕ್ಯಾನ್ಸರ್‌: ಗರ್ಭಕೋಶದಲ್ಲಿ ಕಾಣಿಸುವ ಒಂದು ಬಗೆಯ ಕ್ಯಾನ್ಸರ್‌ನ್ನೇ ಗರ್ಭಾಶಯದ ಕ್ಯಾನ್ಸರ್‌ ಎನ್ನುತ್ತಾರೆ. ಇದು ಬಹಳ ಅಪಾಯಕಾರಿಯಾದ ಸಮಸ್ಯೆಯಾಗಿದ್ದು,

ಗರ್ಭಾಶಯದ ಒಳಪದರ ಎಂದರೆ ಎಂಡೊಮೆಟ್ರಿಯಮ್ ನ್ನು ರೂಪಿಸುವ ಜೀವಕೋಶಗಳ ಪದರದಲ್ಲಿ ಎಂಡೊಮೆಟ್ರಿಯಲ್ ಕ್ಯಾನ್ಸರ್ ಆರಂಭವಾಗುತ್ತದೆ.

ಎಂಡೊಮೆಟ್ರಿಯಲ್ ಕ್ಯಾನ್ಸರ್ ಅನ್ನೇ ಹೆಚ್ಚಾಗಿ ಗರ್ಭಾಶಯದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ.

ಋತುಬಂಧ: ಸಾಮಾನ್ಯವಾಗಿ 40 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಋತುಬಂಧ ಕಾಣಿಸಿಕೊಳ್ಳುತ್ತದೆ. ಎಂದರೆ ಮುಟ್ಟು ನಿಲ್ಲುವ ದಿನಗಳು, ಈ ದಿನಗಳಲ್ಲಿ ಅಧಿಕ ರಕ್ತಸ್ರಾವ ಹಾಗೂ ಹೊಟ್ಟೆ, ಕಿಬ್ಬೊಟ್ಟೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಋತುಬಂಧದ ನಂತರವೂ ರಕ್ತಸ್ರಾವ ಕಾಣಿಸಿಕೊಳ್ಳುತ್ತಿದ್ದರೆ, ಈ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆದುಕೊಳ್ಳುವುದು ಅತ್ಯಗತ್ಯ.

ಪಿಸಿಓಎಸ್‌ ಅಥವಾ ಪಿಸಿಓಡಿ: ಸಾಮಾನ್ಯವಾಗಿ ಇತ್ತೀಚೆಗೆ ಎಲ್ಲ ಮಹಿಳೆಯರಲ್ಲೂ ಕಾಣಿಸಿಕೊಳ್ಳುತ್ತಿರುವ ಸಮಸ್ಯೆ ಎಂದರೆ ಅದು ಪಿಸಿಓಎಸ್‌ ಅಥವಾ ಪಿಸಿಓಡಿ ಸಮಸ್ಯೆ.

ಇದರಿಂದಾಗಿ ದೇಹದಲ್ಲಿ ಬೊಜ್ಜು ಹೆಚ್ಚಾಗುತ್ತದೆ, ಅನಿಯಮಿತ ಮುಟ್ಟು, ಗರ್ಭಾವಸ್ಥೆಯಲ್ಲಿ ಸಮಸ್ಯೆ ಸೇರಿದಂತೆ, ಮಧುಮೇಹಕ್ಕೂ ಕಾರಣವಾಗುವ ಸಾಧ್ಯತೆಯಿರುತ್ತದೆ.

ಮೂತ್ರ ನಾಳದ ಸೋಂಕು: ಮಹಿಳೆಯರು ಹೆಚ್ಚಾಗಿ ಗಮನ ಹರಿಸಬೇಕಾಗಿರುವುದು ಜನನಾಂಗದ ಸ್ವಚ್ಛತೆಯ ಬಗ್ಗೆ. ಇಲ್ಲದೇ ಹೋದರೆ ಮೂತ್ರ ನಾಳದ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.

ಹೊಟ್ಟೆ ನೋವು ಇದರ ಒಂದು ಮುಖ್ಯ ಲಕ್ಷಣವಾಗಿದೆ. ಸಾಮಾನ್ಯವಾಗಿ, ಎಲ್ಲಾ ವಯಸ್ಸಿನವರಲ್ಲಿಯೂ ಕಾಣಿಸಿಕೊಳ್ಳುವ ಈ ಸೋಂಕಿಗೆ ಚಿಕಿತ್ಸೆ ಪಡೆಯುವುದು ಅಗತ್ಯವಾಗಿರುತ್ತದೆ.

ಆದ್ದರಿಂದ ಈ ಸಮಸ್ಯೆ ಆರಂಭವಾದ ಕೂಡಲೇ ಸ್ತ್ರೀ ರೋಗ ತಜ್ಞರನ್ನು ಭೇಟಿ ಮಾಡುವುದು ಉತ್ತಮ.

ಹೀಗೆ, ಮಹಿಳೆಯರು ತಮ್ಮ ಆರೋಗ್ಯವನ್ನು ಎಲ್ಲ ರೀತಿಯಿಂದಲೂ ಕಾಪಾಡಿಕೊಳ್ಳಲು ಸರಿಯಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು,

ಆರೋಗ್ಯಕರ ಆಹಾರ ಸೇವನೆ ಮಾಡುವುದು ಸೇರಿದಂತೆ ಒತ್ತಡ ಮುಕ್ತವಾದ ಜೀವನ ಶೈಲಿಯ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

-ಪವಿತ್ರ

Exit mobile version