ಹಿಜಾಬ್ ಹಿಂದಿರುವ ಕಾರ್ಯಸೂಚಿಯನ್ನು ಬಗ್ಗು ಬಡಿಯುತ್ತೇವೆ : ಸಚಿವ ಸುನೀಲ್ ಕುಮಾರ್!

energy

ರಾಜ್ಯದ ಕರಾವಳಿಯ ಕಾಲೇಜಿನಲ್ಲಿ ಉದ್ಬವಗೊಂಡ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಪ್ರಕರಣ ಇಂದು ದೇಶದ ಪ್ರಮುಖ ವಾದ-ವಿವಾದವಾಗಿದ್ದು, ಧರ್ಮಗಳ ನಡುವಿನ ಸಂಘರ್ಷಣೆಯಂತೆ ಪರಿವರ್ತನೆಯಾಗಿ ಹೋಗಿದೆ. ಇಡೀ ದೇಶದಲ್ಲಿ ಹಿಜಾಬ್ ವಿವಾದ ದೊಡ್ಡ ಸಂಚಲನವನ್ನು ಸೃಷ್ಟಿ ಮಾಡಿದ್ದು, ಪ್ರತಿದಿನ ಒಂದಲ್ಲ ಒಂದು ವಿವಾದಾತ್ಮಕ ತಿರುವು ಪಡೆದುಕೊಂಡಿದೆ. ಸದ್ಯ ಇದೇ ಸುದ್ದಿ ಈಗ ಚರ್ಚೆಯಲ್ಲಿ ಅಗ್ರಸ್ಥಾನ ಪಡೆದಿದ್ದು, ರಾಜಕೀಯ ಕುತಂತ್ರ, ಷಡ್ಯಂತ್ರ ಹಿಜಾಬ್ ವಿವಾದದ ಹಿಂದಿದೆ ಎಂಬ ಆರೋಪವನ್ನು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಉಡುಪಿಯಲ್ಲಿ ಹಿಜಾಬ್ ಗೊಂದಲದ ಬಗ್ಗೆ ಮಾತನಾಡಿರುವ ಸಚಿವ ಸುನೀಲ್ ಕುಮಾರ್ ಅವರು ಕಾಂಗ್ರೆಸ್ನ ಟೂಲ್ ಕಿಟ್ ನ ಮುಂದುವರಿದ ಭಾಗವಾಗಿ ಇನ್ನೇನೋ ಮಾಡುತ್ತೇನೆ ಎನ್ನುವುದನ್ನು ಸಹಿಸೋದಕ್ಕೆ ನಮ್ಮಿಂದ ಸಾಧ್ಯವಿಲ್ಲ. ಇದನ್ನು ಹೆತ್ತವರು ಕೂಡ ಅರ್ಥ ಮಾಡಿಕೊಳ್ಳಬೇಕು ಎಂದು ಗುಡುಗಿದ್ದಾರೆ. ರಾಜ್ಯ ಸರ್ಕಾರ ಈ ಹಿಜಾಬ್ ಹಿಂದಿರುವ ಷಡ್ಯಂತ್ರವನ್ನು ಸಹಿಸುವುದಿಲ್ಲ. ಹಿಜಾಬ್ ಹಿಂದಿರುವ ಕಾಣದ ಮತೀಯ ಸಂಘಟನೆಗಳನ್ನು ಸರ್ಕಾರ ಬಗ್ಗು ಬಡಿಯಲಿದೆ ಎಂದು ಇಂಧನ ಮತ್ತು ಕನ್ನಡ, ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲ್ ಅವರು ತಿಳಿಸಿದ್ದಾರೆ.

ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಪಾಲಿಸುವುದು ಎಲ್ಲರ ಆದ್ಯ ಕರ್ತವ್ಯ. ವಿದ್ಯಾಭ್ಯಾಸ ಮಾಡಲು ಬಂದವರು ಸಮವಸ್ತ್ರ ಎಲ್ಲರಿಗೂ ಕಡ್ಡಾಯ ಅದು ಎಲ್ಲರಿಗೂ ಅನ್ವಯವಾಗುವುದು. ಇದನ್ನು ನಿರ್ಲಕ್ಷಿಸಿ ತಮ್ಮದೇ ಶೈಲಿಯಲ್ಲಿ ಬರುತ್ತೇವೆ. ಸಮವಸ್ತ್ರ ಪಾಲನೆಯನ್ನು ವಿರೋಧಿಸಿ ಬರುತ್ತೇವೆ ಎನ್ನುವುದಕ್ಕೆ ಇಲ್ಲಿ ಅವಕಾಶವಿಲ್ಲ. ನಮ್ಮ ನೆಲದ ಕಾನೂನು ಗೌರವಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಕಾನೂನನ್ನು ಯಾರು ಗೌರವಿಸುವುದಿಲ್ಲವೋ ಅವರು ಈ ಮಣ್ಣಿನಲ್ಲಿ ಇರಲು ಯೋಗ್ಯರಲ್ಲ! ಶಾಲಾ-ಕಾಲೇಜಿಗೆ ಎಂದು ನಿಯೋಜಿಸಿರುವ ಸಮವಸ್ತ್ರ ಎಲ್ಲಾ ವಿದ್ಯಾರ್ಥಿಗಳಿಗೂ ಅನ್ವಯ, ಆ ಸಂಪ್ರದಾಯದಲ್ಲಿಯೇ ಎಲ್ಲರೂ ಹೋಗುವುದು ಸರಿಯೇ ವಿನಃ ಯಾವುದೋ ಮತೀಯ ಸಂಗತಿಯನ್ನು ವೈಭವೀಕರಿಸುವುದು ಅಕ್ಷರಶಃ ತಪ್ಪು. ಇದನ್ನು ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಶೈಕ್ಷಣಿಕ ಪದ್ಧತಿಯ ಅನುಸಾರ ಹೇಳುವುದಾದರೇ, ಕಾಲೇಜಿಗೆ ವಿದ್ಯಾಭ್ಯಾಸ ಮಾಡಲು ಬಂದವರು ನಮಗೆ ಕನ್ನಡ ಬರುವುದಿಲ್ಲ, ಉರ್ದು ಭಾಷೆಯಲ್ಲಿ ಪಾಠ ಮಾಡಿ ಎಂದರೆ ಹೇಗೆ? ಆ ರೀತಿ ಮಾಡಲು ಸಾಧ್ಯವಾ? ಇಲ್ಲ ಅಲ್ಲವೇ. ವ್ಯವಸ್ಥೆಯಂತೆ ಹೋಗುವುದು ಒಳಿತು. ಇಲ್ಲಿ ಅವರೊಂದು ಗುಂಪು, ನಾವೊಂದು ಗುಂಪು ಎನ್ನುವುದು ಬೇಡ. ಎಲ್ಲರೂ ಸಮವಸ್ತ್ರ ನಿಯಮ ಪಾಲಿಸಿ ತರಗತಿಗಳಿಗೆ ಹಾಜರಾಗುವುದು ಸರಿ ಎಂದು ಸಚಿವ ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

Exit mobile version