ಗಾನ ಕೋಗಿಲೆ `ಲತಾ ಮಂಗೇಶ್ಕರ್’ ಅವರ ಸಾಧನೆಯ ಪಯಣವೇ ಒಂದು ಶ್ರೇಷ್ಠ, ವಿಶಿಷ್ಟ!

singer

ಲತಾ ಮಂಗೇಶ್ಕರ್(Lata Mangeshkar) ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಲತಾ ಮಂಗೇಶ್ಕರ್ ಅವರು 28 ಸೆಪ್ಟೆಂಬರ್ 1929 ರಲ್ಲಿ ಮಹಾರಾಷ್ಟ್ರದ(Maharashtra) ಬ್ರಾಹ್ಮಣ(Brahmin) ಕುಟುಂಬದಲ್ಲಿ ಜನಿಸುತ್ತಾರೆ. ಲತಾ ಮಂಗೇಶ್ಕರ್ ಅವರು ತಮ್ಮ ಮೊದಲ ಸಂಗೀತ(Music) ಪಾಠವನ್ನು ಅವರ ತಂದೆಯಿಂದಲೆ ಪಡೆಯುತ್ತಾರೆ. ಸ್ವತಃ ಲತಾ ಮಂಗೇಶ್ಕರ್ ಅವರ ತಂದೆ ದೀನನಾಥ್ ಮರಾಠಿ ಮತ್ತು ಕೊಂಕಣಿ(Konkani) ಸಂಗೀತಗಾರರು(Musicians) ಹಾಗು ಶಾಸ್ತ್ರೀಯ(Classical) ಗಾಯಕ ಮತ್ತು ರಂಗಭೂಮಿ ನಟರಾಗಿರುತ್ತಾರೆ.

ಲತಾ ಮಂಗೇಶ್ಕರ್ ಅವರು ಹುಟ್ಟಿದಾಗ “ಹೇಮಾ” ಎಂದು ಹೆಸರಿಡಲಾಗುತ್ತದೆ. ನಂತರದ ದಿನಗಳಲ್ಲಿ ಲತಾ ಎಂದು ಮರುನಾಮಕರಣ ಮಾಡಲಾಯಿತು. ಮುಂದೆ ಭಾರತದಲ್ಲಿನ ಶ್ರೇಷ್ಠ ಮತ್ತು ಅತ್ಯಂತ ಬೇಡಿಕೆಯ, ಗೌರವಾನ್ವಿತ ಗಾಯಕರ ನಡುವೆ ಲತಾ ಅವರು ಪ್ರಮುಖರಾಗಿ ಬೆಳೆದು ‘ಗಾನ ಕೋಗಿಲೆ’ ಎಂದೇ ಪ್ರಸಿದ್ದರಾಗುತ್ತಾರೆ. ತಮ್ಮ ಏಳು ದಶಕಗಳ (70 ವರ್ಷಗಳು) ವೃತ್ತಿಜೀವನದಲ್ಲಿ, ಭಾರತೀಯ ಸಂಗೀತ ಉದ್ಯಮಕ್ಕೆ ಇವರ ಕೊಡುಗೆಯು “ನೈಟಿಂಗೇಲ್ ಆಫ್ ಇಂಡಿಯಾ”, ವಾಯ್ಸ್ ಆಫ್ ದಿ ಮಿಲೇನಿಯಮ್ ಮತ್ತು ಕ್ವೀನ್ ಆಫ್ ಮೆಲೋಡಿ ಮುಂತಾದ ಗೌರವಾನ್ವಿತ ಬಿರುದುಗಳನ್ನು ತಂದುಕೊಡುತ್ತದೆ.

ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಲತಾ ಮಂಗೇಶ್ಕರ್ ಅವರ ಹೆಸರು ಸೇರ್ಪಡೆ.

ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಲತಾ ಮಂಗೇಶ್ಕರ್ ಅವರನ್ನು ಇತಿಹಾಸದಲ್ಲಿ ಅತಿ ಹೆಚ್ಚು ರೆಕಾರ್ಡ್ (30,000) ಮಾಡಿದ ಕಲಾವಿದೆ ಎಂದು ಪಟ್ಟಿಮಾಡಿತು. ಲತಾ ಮಂಗೇಶ್ಕರ್ ಅವರು 36 ಭಾರತೀಯ ಭಾಷೆಗಳಲ್ಲಿ ಮತ್ತು ಕೆಲವು ವಿದೇಶಿ ಭಾಷೆಗಳಲ್ಲಿ ಹಾಡುಗಳನ್ನು ಧ್ವನಿ ಮುದ್ರಿಸಿದ್ದಾರೆ. ವೃತ್ತಿಜೀವನದುದ್ದಕ್ಕೂ ಹಲವಾರು ಪುರಸ್ಕಾರಗಳು ಮತ್ತು ಗೌರವಗಳನ್ನು ಪಡೆದ ಲತಾ ಮಂಗೇಶ್ಕರ್ ಅವರು, ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ, ಪದ್ಮವಿಭೂಷಣ, ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಮತ್ತು ಗೌರವಗಳನ್ನು ಪಡೆದಿದ್ದಾರೆ.

ಎರಡು ದಿನಗಳಕಾಲ ರಾಷ್ಟ್ರೀಯ ಶೋಕಾಚರಣೆ :

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ತಮ್ಮ 92 ನೇ ವಯಸ್ಸಿನಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಭಾನುವಾರ 06-02-2022 ರಂದು ಬೆಳಗ್ಗೆ 8:12ಕ್ಕೆ ಮುಂಬೈನಲ್ಲಿ ನಿಧನರಾದರು. ಭಾನುವಾರ ಸಂಜೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಭಾರತದ ಸ್ವರ ಕೋಕಿಲಾಗೆ ಅಂತಿಮ ನಮನ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಕೂಡ ಮುಂಬೈಗೆ ಭೇಟಿ ನೀಡಿದ್ದರು.

ಭಾರತ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸೂಚಕವಾಗಿ ದೇಶಾದ್ಯಂತ ಎರಡು ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ. ಎರಡು ದಿನಗಳ ಕಾಲ ರಾಷ್ಟ್ರಧ್ವಜ ಅರ್ಧಕ್ಕೆ ಹಾರಲಿದ್ದು, ಯಾವುದೇ ಅಧಿಕೃತ ಮನರಂಜನೆ ಇರುವುದಿಲ್ಲ. ಶ್ರೇಷ್ಟ ಗಾಯಕಿ S. ಸುಬ್ಬುಲಕ್ಷ್ಮಿ ಅವರ ನಂತರ ಭಾರತದ ಅತ್ಯುನ್ನತ ಗೌರವಾನ್ವಿತ ‘ಭಾರತ ರತ್ನ’ ಪ್ರಸಸ್ತಿಯನ್ನು ಪಡೆದ ಎರಡನೇ ಮಹಿಳಾ ಗಾಯಕಿ ಎಂಬ ಹೆಗ್ಗಳಿಕೆ ಲತಾ ಮಂಗೇಶ್ಕರ್ ಅವರಿಗೆ ಸೇರುತ್ತದೆ.

Exit mobile version