ಭಾರತಕ್ಕೆ ತೈವಾನ್ ಬಗ್ಗೆ ಕಾಳಜಿ ಇದೆ : ವಿದೇಶಾಂಗ ಸಚಿವಾಲಯ

Taiwan

ದೆಹಲಿ : ದ್ವೀಪರಾಷ್ಟ್ರ ತೈವಾನ್ನಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ತೈವಾನ್‌ ದ್ವೀಪದ ಸುತ್ತಲೂ ಚೀನಾ ನಡೆಸುತ್ತಿರುವ ಯುದ್ದಾಭ್ಯಾಸಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ, ಎರಡೂ ದೇಶಗಳು ಸಂಯಮ ಕಾಪಾಡುವಂತೆ ಒತ್ತಾಯಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಈ ಕುರಿತು ಹೇಳಿಕೆ ನೀಡಿದ್ದು, ಅನೇಕ ದೇಶಗಳಂತೆ ಭಾರತವೂ ತೈವಾನ್ನಲ್ಲಿನ ಈ ಬೆಳವಣಿಗೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. “ನಾವು ಸಂಯಮದ ಯುದ್ದಾಭ್ಯಾಸ, ಯಥಾಸ್ಥಿತಿಯನ್ನು ಬದಲಾಯಿಸಲು ಏಕಪಕ್ಷೀಯ ಕ್ರಮಗಳನ್ನು ತಪ್ಪಿಸುವುದು, ಉದ್ವಿಗ್ನತೆಯನ್ನು ಕಡಿಮೆ ಮಾಡುವುದು ಮತ್ತು ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಪ್ರಯತ್ನಗಳನ್ನು ಒತ್ತಾಯಿಸುತ್ತೇವೆ” ಎಂದು ಅರಿಂದಮ್ ಬಗ್ಚಿ ಹೇಳಿದ್ದಾರೆ. ತೈವಾನ್‌ಕುರಿತು ಭಾರತದ ನೀತಿಗಳು ಸ್ಥಿರವಾಗಿವೆ. ಅದರ ಪುನರಾವರ್ತನೆಯ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನು ಚೀನಾ ಮತ್ತು ತೈವಾನ್‌ನಡುವಿನ ಸಂಘರ್ಷವನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಏಷ್ಯಾ ವಲಯದಲ್ಲಿ ಈ ಸಂಘರ್ಷದಿಂದ ಉಂಟಾಗುವ ಉದ್ವಿಗ್ನತೆ ಮತ್ತು ಸವಾಲುಗಳನ್ನು ಎದುರಿಸಲು ಭಾರತ ಸಜ್ಜಾಗುತ್ತಿದೆ ಎನ್ನಲಾಗಿದೆ. ಹೀಗಾಗಿಯೇ ಚೀನಾ ವಿಚಾರದಲ್ಲಿ ಭಾರತದ ನಿಲುವುಗಳು ಸ್ಪಷ್ಟವಾಗಿವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಇನ್ನು ತೈವಾನ್ ಜಲಸಂಧಿಯಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ 21 ಚೀನಾದ ಮಿಲಿಟರಿ ವಿಮಾನಗಳು ಮತ್ತು 6 ನೌಕಾ ಪಡೆಯ ಹಡಗುಗಳನ್ನು ತೈವಾನ್‌ಗುರುವಾರ ಪತ್ತೆಹಚ್ಚಿದ ನಂತರ ಪರಿಸ್ಥಿತಿ ಗಂಭೀರ ಹಂತಕ್ಕೆ ತಲುಪಿದೆ ಎನ್ನಲಾಗುತ್ತಿದೆ. ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್‌ಭೇಟಿಯನ್ನು ತೀವ್ರವಾಗಿ ಖಂಡಿಸಿದ್ದ ಚೀನಾ, ಅಮೇರಿಕಾ ಚೀನಾದ ಸಾರ್ವಭೌಮತ್ವವನ್ನು ಅವಮಾನಿಸಿದೆ. ಏಷ್ಯಾದಲ್ಲಿ ಉದ್ವಿಗ್ನತೆ ಸೃಷ್ಟಿಸುವ ದುಸ್ಸಾಹಸಕ್ಕೆ ಅಮೇರಿಕಾ ಇಳಿದಿದೆ. ಇದಕ್ಕೆ ತಕ್ಕ ಪಾಠವನ್ನು ಕಲಿಸಲಿದ್ದೇವೆ ಎಂದು ಚೀನಾ ಹೇಳಿತ್ತು. ಇದರ ಭಾಗವಾಗಿ ಚೀನಾ ಕೆಲ ದಿನಗಳಿಂದ ತೈವಾನ್‌ದ್ವೀಪದ ಸುತ್ತಲೂ ಯುದ್ದ ವಿಮಾನ ಮತ್ತು ಯುದ್ದ ನೌಕೆಗಳನ್ನು ನಿಯೋಜಿಸಿದೆ. ವಿದೇಶಗಳೊಂದಿಗಿನ ತೈವಾನ್‌ಸಂಪರ್ಕವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ನೌಕಾ ಸೇನೆಯನ್ನು ನಿಯೋಜಿಸಿದೆ ಎನ್ನಲಾಗುತ್ತಿದೆ.

Exit mobile version