ಜಾನ್ಸನ್ & ಜಾನ್ಸನ್​ ಕಂಪನಿಯ ಲಸಿಕಾ ಪ್ರಯೋಗಕ್ಕೆ ಭಾರತ ಒಪ್ಪಿಗೆ

ದೆಹಲಿ, ಏ. 09: ಜಾನ್ಸನ್ & ಜಾನ್ಸನ್​ ಕಂಪನಿಯ ಸಿಂಗಲ್ ಡೋಸ್ ಕೊವಿಡ್ ತಡೆ ಲಸಿಕೆ ಪ್ರಯೋಗಕ್ಕೆ ಭಾರತ ಸರ್ಕಾರವು ಅನುಮತಿ ನೀಡಿದೆ. ಅಮೆರಿಕ ಮೂಲದ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಗೆ ಭಾರತದಲ್ಲಿ ಎರಡು ಹಂತದ ಪ್ರಯೋಗ ನಡೆಸಲು ಅನುಮತಿ ಸಿಕ್ಕಿದೆ. ಈ ಸಂಬಂಧ ಔಷಧ ಮಹಾ ನಿಯಂತ್ರಕರ (DGCA) ಸೂಚನೆಗೆ ಪ್ರತಿಕ್ರಿಯಿಸಿರುವ ಜಾನ್ಸನ್ & ಜಾನ್ಸನ್, ಭಾರತದಲ್ಲಿ ಶೀಘ್ರ ಲಸಿಕೆ ಪ್ರಯೋಗ ಆರಂಭಿಸಲಾಗುವುದು ಎಂದು ತಿಳಿಸಿದೆ.

ಜಾನ್ಸನ್​ ಅಂಡ್ ಜಾನ್ಸನ್ ಸಂಸ್ಥೆಯ ಸಿಂಗಲ್ ಶಾಟ್ ಲಸಿಕೆಗೆ ಮುಂದಿನ ದಿನಗಳಲ್ಲಿ ಅನುಮತಿ ದೊರೆತರೆ ಲಸಿಕೆ ಹೆಚ್ಚು ಜನರಿಗೆ ಒದಗಿಸಲು ಸರ್ಕಾರಗಳಿಗೆ ಸಾಧ್ಯವಾಗುತ್ತದೆ. ಆರಂಭದಲ್ಲಿ 1000 ಮಂದಿಯನ್ನು ಲಸಿಕೆ ಪ್ರಯೋಗಕ್ಕಾ ಕಂಪನಿಯು ಗುರುತಿಸಿಕೊಳ್ಳಬೇಕಾಗುತ್ತದೆ. ಇವರಿಗೆ ಲಸಿಕೆ ನೀಡಿ, ಅವರ ದೇಹದಲ್ಲಿ ಆಗುವ ಪರಿಣಾಮಗಳನ್ನು ಆಮೂಲಾಗ್ರ ದಾಖಲಿಸಿ ಹಿಂದಿನ ದತ್ತಾಂಶಗಳ ಜೊತೆಗೆ ಹೋಲಿಸಿ ನೋಡಬೇಕಿದೆ. ಸಮಾಧಾನಕರ ಫಲಿತಾಂಶಗಳು ಬಂದರೆ ಲಸಿಕೆ ಬಳಕೆಗೆ ಅನುಮತಿ ಸಿಗಲಿದೆ.

ಭಾರತದಲ್ಲಿ ಜಾನ್ಸನ್ ಅಂಡ್​ ಜಾನ್ಸನ್ ಕಂಪನಿಯು ‘ಬಯಲಾಜಿಕಲ್ ಇ’ ಕಂಪನಿಯ ಜೊತೆಗೆ ಲಸಿಕೆ ಉತ್ಪಾದನಾ ತಂತ್ರಜ್ಞಾನ ಹಂಚಿಕೊಳ್ಳುವ ಮತ್ತು ಉತ್ಪಾದನೆಗೆ ಬೇಕಾದ ವ್ಯವಸ್ಥೆ ರೂಪಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ. ಕಳೆದ ಫೆಬ್ರುವರಿಯಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗೆ ಅಮೆರಿಕದಲ್ಲಿ ತುರ್ತುಬಳಕೆ ಅನುಮತಿ ಸಿಕ್ಕಿತ್ತು.

Exit mobile version