ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಭಾರತೀಯ ತೇಜಸ್ ಯುದ್ಧ ವಿಮಾನ ಪತನ: ತನಿಖೆಗೆ ಆದೇಶ ನೀಡಿದ ವಾಯುಪಡೆ

New Delhi: ತರಬೇತಿ ಹಾರಾಟದ ವೇಳೆ ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ (LAC) ತೇಜಸ್ ಅಪಘಾತಕ್ಕೀಡಾದ ಘಟನೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಇಂದು ನಡೆದಿದೆ. ಇಲ್ಲಿನ ಹಾಸ್ಟೆಲ್ ಕಾಂಪ್ಲೆಕ್ಸ್‌ ಒಂದಕ್ಕೆ ಯುದ್ಧ ವಿಮಾನ ಅಪ್ಪಳಿಸಿದೆ. ವಿಮಾನ ಪತನಗೊಳ್ಳುವ ಮುನ್ನವೇ ಪೈಲಟ್ ವಿಮಾನ ತುರ್ತು ನಿರ್ಗಮನ ದ್ವಾರದಿಂದ ಹೊರಗೆ ಬಂದಿದ್ದಾರೆ. ಇನ್ನು ವಿಮಾನ ಅಪ್ಪಳಿಸಿದ ಸ್ಥಳದಲ್ಲೂ ಯಾವುದೇ ಸಾವು ನೋವು ಸಂಭವಿಸಿಲ್ಲ.

ಆದರೆ, 2001ರಲ್ಲಿ ತೇಜಸ್ ಸರಣಿಯ ಯುದ್ಧ ವಿಮಾನ ಕಾರ್ಯಾರಂಭ ಮಾಡಿದ 23 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪತನಗೊಂಡಿದೆ. ಹೀಗಾಗಿ, ಈ ಘಟನೆ ಕುರಿತಾಗಿ ಸಮಗ್ರ ತನಿಖೆ ನಡೆಸಲು ಭಾರತೀಯ ವಾಯು ಪಡೆ ಮುಂದಾಗಿದೆ.

ಬೆಂಗಳೂರು (Bengaluru) ಮೂಲದ ಎಚ್‌ಎಎಲ್‌ ಸಂಸ್ಥೆಯ ಹೆಮ್ಮೆಯ ತೇಜಸ್ ಯುದ್ಧ ವಿಮಾನದ ತಾಂತ್ರಿಕ ಪರೀಕ್ಷೆ ಮೊಟ್ಟ ಮೊದಲ ಬಾರಿಗೆ 2001ರಲ್ಲಿ ನಡೆದಿತ್ತು. 2016ರಲ್ಲಿ ಭಾರತೀಯ ವಾಯು ಪಡೆಗೆ ಸೇರ್ಪಡೆ ಮಾಡಲಾಗಿತ್ತು. ಹಗುರ ಯುದ್ಧ ವಿಮಾನವಾದ ತೇಜಸ್ (Tejas Aircraft), ಸೇನಾ ಪಡೆಗಳ ಹಲವು ಕಾರ್ಯಗಳಿಗೆ ಬಳಕೆ ಆಗುತ್ತವೆ. ದಾಳಿ ಹಾಗೂ ಸೇನಾ ಸಹಕಾರ ಸೇರಿದಂತೆ ಹಲವು ಕಾರ್ಯಗಳಿಗೆ ಬಳಕೆ ಆಗುತ್ತದೆ. ತನ್ನ ಶ್ರೇಣಿಯಲ್ಲಿ ಅತ್ಯಂತ ಸಣ್ಣದಾದ ಹಾಗೂ ಹಗುರವಾದ ಯುದ್ಧ ವಿಮಾನ ಎಂಬ ಹೆಗ್ಗಳಿಕೆ ತೇಜಸ್‌ಗೆ ಇದೆ.

ಸದ್ಯ ಭಾರತೀಯ ವಾಯು ಪಡೆಯಲ್ಲಿ ತೇಜಸ್ ಎಂಕೆ (Tejas MK)1 ಸರಣಿಯ 40 ಯುದ್ಧ ವಿಮಾನಗಳು ಇವೆ. ಇನ್ನು ತೇಜಸ್ ಎಂಕೆ – 1ಎ ಸರಣಿಯ 83 ಯುದ್ಧ ವಿಮಾನಗಳಿಗಾಗಿ ಭಾರತೀಯ ವಾಯು ಪಡೆ ಬೇಡಿಕೆ ಸಲ್ಲಿಸಿದ್ದು, ಇದರ ಮೌಲ್ಯ 36,468 ಕೋಟಿ ರೂ. ಎಂದು ತಿಳಿದು ಬಂದಿದೆ.

Exit mobile version