ಇಂದಿನಿಂದ ಐತಿಹಾಸಿಕ ಕಡಲೆ ಕಾಯಿ ಪರಿಷೆ ಆರಂಭ

ಬೆಂಗಳೂರು ನ 29 : ಇಂದಿನಿಂದ ಐತಿಹಾಸಿಕ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಆರಂಭವಾಗಿದ್ದು, ಇನ್ನು 3 ದಿನಗಳ ಕಾಲ ಈ ಪರಿಷೆ ನಡೆಯಲಿದೆ.

ಬಿಬಿಎಂಪಿ ಹಾಗೂ ಮುಜರಾಯಿ ಇಲಾಖೆಯಿಂದ ಇಂದು ಬೆಳಿಗ್ಗೆ 10.30ಕ್ಕೆ ಪರಿಷೆಗೆ ಚಾಲನೆ ನೀಡಿದ್ದು,  ಬಸವನಗುಡಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದೆ. ಪರಿಷೆಯ ಪ್ರಮುಖ ಅಕರ್ಷಣೆಯಾದ ತರಹೇವಾರಿ ಕಡಲೆಕಾಯಿಗಳು ಜನರನ್ನ ಆಕರ್ಷಿಸುತ್ತಿವೆ. 3 ದಿನಗಳ ಕಾಲ ನಡೆಯುವ ಅದ್ದೂರಿ ಜಾತ್ರೆಗೆ ಲಕ್ಷಾಂತರ ಜನ ಸೇರುವ ಸಾಧ್ಯತೆ ಇದ್ದು,  ಸಂಸದ ತೇಜಸ್ವಿ ಸೂರ್ಯ ನಿನ್ನೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಸಿದ್ಧತೆಗಳನ್ನ ಪರಿಶೀಲಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಬಿಬಿಎಂಪಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಎಲ್ಲರಿಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.

ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬಸವನಗುಡಿ ಕಡಲೆ ಕಾಯಿ ಪರಿಷೆ ನಡೆಯುತ್ತದೆ. ಇದು ಸಾಮಾನ್ಯವಾಗಿ ನವೆಂಬರ್ ಕೊನೆಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಬರುತ್ತದೆ.ಬಸವನಗುಡಿ ಕಡಲೆ ಕಾಯಿ ಪರಿಷೆ ಬೆಂಗಳೂರು ನಗರದ ಬಸವನಗುಡಿ ಪ್ರದೇಶದಲ್ಲಿ ನಡೆಯುವ ವಾರ್ಷಿಕ ನೆಲಗಡಲೆ ಜಾತ್ರೆ. ಬಸವನಗುಡಿ ಕಡಲೆ ಕಾಯಿ ಪರಿಷೆಯನ್ನು ಬುಲ್ ಟೆಂಪಲ್ ರಸ್ತೆಯ ಎರಡೂ ಬದಿಗಳಲ್ಲಿ ಮತ್ತುಸುತ್ತಮುತ್ತಲಿನ ಪ್ರದೇಶದಲ್ಲಿ ಎರಡು ದಿನಗಳ ಕಾಲ ನಡೆಸಲಾಗುತ್ತದೆ.

ಇತಿಹಾಸ:

ಬೆಂಗಳೂರು ಈ ಗಾತ್ರದಲ್ಲಿ ಬೆಳೆದು ಮಹಾ ನಗರವಾಗುವ ಮೊದಲು, ಬಸವನಗುಡಿಯ ಪಕ್ಕದ ಹಳ್ಳಿಗಳಲ್ಲಿ ಪ್ರತಿ ವರ್ಷ ನೆಲಗಡಲೆ (ಶೇಂಗಾ) ಬೆಳೆಯುತ್ತಿದ್ದರು. ಆದರೆ ಕಟಾವಿಗೆ ಸಿದ್ಧವಾದಗ ನೆಲಗಡಲೆಯನ್ನೆಲ್ಲ ಗದ್ದೆಗೆ ದಾಳಿ ಇಡುತ್ತಿದ್ದ ಬಸವವೊಂದು ನಾಶಪಡಿಸುತ್ತಿತ್ತು. ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸಿ ಬಸವ (ನಂದಿ)ನನ್ನ ಪ್ರಾರ್ಥಿಸಲು ಆರಂಭಿಸಿದರು. ಬಸವನಗುಡಿ ಪ್ರದೇಶದಲ್ಲಿ ನಂದಿಯ ವಿಗ್ರಹವೊಂದು ದೊರಕಿತು ಮತ್ತು ಈ ಸ್ಥಳದಲ್ಲಿ ಕೆಂಪೇಗೌಡರು 16 ನೇಶತಮಾನದಲ್ಲಿ ನಂದಿಯ ಸುತ್ತಲೂ ದೇವಾಲಯವನ್ನು ನಿರ್ಮಿಸಿದರು. ಇದನ್ನು ಬಸವನ ಗುಡಿ ಅಥವಾ ಬಿಗ್ ಬುಲ್ ಟೆಂಪಲ್ ಎಂದು ಕರೆಯಲಾಗುತ್ತದೆ. ಕಡಲೆ ಕಾಯಿ ಪರಿಷೆ ಈ ದೇವಾಲಯದ ಸುತ್ತ ಕೇಂದ್ರೀಕೃತವಾಗಿದೆ ಮತ್ತು ಬಸವ ರೈತರು ಅರ್ಪಿಸಿದ ನೆಲಗಡಲೆಯನ್ನು ಸ್ವೀಕರಿಸಿ ಆಶೀರ್ವದಿಸುತ್ತಾನೆ ಎಂಬ ನಂಬಿಕೆಯಿದೆ. 

Exit mobile version