ಕಲ್ಬುರ್ಗಿ ಮೇಯರ್‌ ಸ್ಥಾನಕ್ಕೆ ಬೇಡಿಕೆ ಇಟ್ಟ ಜೆಡಿಎಸ್‌

H. D. Deve Gowda

ಕಲ್ಬುರ್ಗಿ ಸೆ 08 : ಕಲ್ಬುರ್ಗಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸದ ಹಿನ್ನಲೆಯಲ್ಲಿ ಜೆಡಿಎಸ್‌ ನಿರ್ಣಾಯಕ ಪಾತ್ರ ವಹಿಸಿದ್ದು, ಯಾವ ಪಕ್ಷವು ಜೆಡಿಎಸ್‌ಗೆ ಮೇಯರ್‌ ಸ್ಥಾನ ಬಿಟ್ಟು ಕೊಡುತ್ತದೆಯೋ ಆ ಪಕ್ಷಕ್ಕೆ ಅವರ ಬೆಂಬಲವೆಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ನಾಸೀರ್ ಹುಸೇನ್ ಮಾತನಾಡಿ ಕಲ್ಬುರ್ಗಿ ಮಹಾನಗರ ಪಾಲಿಕೆಯ ಮೇಯರ್ ಗಾದಿ ಜೆಡಿಎಸ್‌ಗೆ ಬಿಟ್ಟುಕೊಡಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳಿಗೆ ಬೇಡಿಕೆ ಇಟ್ಟಿದ್ದೇವೆ ಎಂದರು. ನಾವು 4 ಮಂದಿ ಮಹಾನಗರ ಪಾಲಿಕೆಯ ನೂತನ ಸದಸ್ಯರು ಹೆಚ್‌.ಡಿ.ಕುಮಾರಸ್ವಾಮಿಯವರನ್ನು ಭೇಟಿಯಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೇವೆ. ನಮ್ಮ ಪಕ್ಷದ ಸದಸ್ಯರಿಗೆ ಮೇಯರ್ ಹುದ್ದೆ ನೀಡಿ ಅಂತಾ ನಾವು ಬೇಡಿಕೆ ಇಟ್ಟಿದ್ದೇವೆ, ಕುಮಾರಸ್ವಾಮಿಯವರ ಭೇಟಿ ಸಮಯದಲ್ಲಿ ಯಾವುದೇ ಪಕ್ಷಕ್ಕೆ ಬೆಂಬಲ ಕೊಡುವ ಬಗ್ಗೆ ಚರ್ಚೆ ಆಗಿಲ್ಲ, ಅಂತಿಮ ನಿರ್ಧಾರವನ್ನು ನಮ್ಮ ಪಕ್ಷದ ವರಿಷ್ಠರು ತೆಗೆದುಕೊಳ್ಳುತ್ತಾರೆ ಎಂದು ನೂತನ ಕಲಬುರಗಿ ಪಾಲಿಕೆ ಸದಸ್ಯರು ಸ್ಪಷ್ಟಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕಲ್ಬುರ್ಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕೆಂಬ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ನನ್ನ ಬಳಿ ಮಾತಾಡಿದ್ದಾರೆ. ಕುಮಾರಸ್ವಾಮಿ ಹತ್ತಿರವೂ ಮಾತನಾಡಿದ್ದಾರೆ ಆದರೆ ಕಲ್ಬುರ್ಗಿ ಜೆಡಿಎಸ್ ಮುಖಂಡರ ಅಭಿಪ್ರಾಯ ಪಡೆಯದೇ ನಾವೇ ನಿರ್ಧಾರ ಮಾಡಬಾರದು ಎಂದು ಕುಮಾರಸ್ವಾಮಿಗೂ ಸೂಚಿಸಿದ್ದೇನೆ ಎಂದು ತಿಳಿಸಿದರು.



Exit mobile version