ಸರ್ಕಾರಕ್ಕೆ ಬಜೆಟ್‌ನಲ್ಲಿ 8 ಸಾವಿರ ಕೋಟಿ ಅನುದಾನ ಕೇಳಿದ ಬಿಬಿಎಂಪಿ

Bengaluru: ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭೆ ಬಜೆಟ್‌ ಅಧಿವೇಶನದಲ್ಲಿ ಮೂಲಸೌಕರ್ಯ ಯೋಜನೆಗಳು ಮತ್ತು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು 8,050 ಕೋಟಿ ರೂಪಾಯಿಗಳ ಆರ್ಥಿಕ ನೆರವು ನೀಡುವಂತೆ ಬಿಬಿಎಂಪಿ (BBMP) ಸರ್ಕಾರಕ್ಕೆ ಮನವಿ ಮಾಡಿದೆ.

ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ಮತ್ತು ನಡೆಯುತ್ತಿರುವ ಕಾಮಗಾರಿಗಳಿಗೆ ಸುಮಾರು 3,000 ಕೋಟಿ ರೂ. ಬೇಕಾಗಿದೆ. ಇನ್ನು ಗುತ್ತಿಗೆದಾರರಿಗೆ ಬಿಬಿಎಂಪಿ ನೀಡಬೇಕಿರುವ ಒಟ್ಟು ಬಾಕಿ ಮೊತ್ತ 2,700 ಕೋಟಿ ರೂಪಾಯಿ ಎಂದು ಪಾಲಿಕೆ ಮೂಲಗಳು ತಿಳಿಸಿವೆ. ಇಂದಿರಾ ಕ್ಯಾಂಟೀನ್ (Indira Canteen) ನಿರ್ವಹಣೆಗೆ 200 ಕೋಟಿ ರೂ., ಘನತ್ಯಾಜ್ಯ ನಿರ್ವಹಣೆಗೆ 600 ಕೋಟಿ ರೂ., ಮಳೆ ನೀರು ಚರಂಡಿಗಳ ಅಭಿವೃದ್ಧಿಗೆ 200 ಕೋಟಿ ರೂ. ಅಗತ್ಯವಿದೆ ಎಂದು ಬಿಬಿಎಂಪಿ ಸರ್ಕಾರಕ್ಕೆ ತಿಳಿಸಿದೆ.

ಮೂಲಗಳ ಪ್ರಕಾರ, ಬಿಬಿಎಂಪಿ ಕಳೆದ ವರ್ಷ ಸುಮಾರು 9,000 ಕೋಟಿ ಅನುದಾನವನ್ನು ಕೋರಿತ್ತು ಮತ್ತು ಸರ್ಕಾರ ಕೇವಲ 3,732 ಕೋಟಿ ರೂ. ನೀಡಿತ್ತು. ಉಳಿದ ಹಣವನ್ನು ಹೊಸ ಯೋಜನೆಗಳ ಅನುಷ್ಠಾನಕ್ಕೆ ಬಳಸಲಾಗುವುದು. ಈ ಬಾರಿ ನಗರದ ಮೊದಲ ಸುರಂಗ ಮಾರ್ಗ ಯೋಜನೆ ಮತ್ತು ಸ್ಕೈ ಡೆಕ್ (Sky Deck) ಯೋಜನೆ ಆರಂಭಿಸಲು ಸರ್ಕಾರ ಉತ್ಸುಕವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ (ಫೆ.12) ರಂದು ಅಧಿವೇಶನ ಆರಂಭವಾಗಿದ್ದು, ಇಂದು (ಫೆ.13) ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ಆರಂಭವಾಗಿದೆ. ರಾಜ್ಯದಲ್ಲಿ ಈಗಾಗಲೆ ಬಜೆಟ್​ (Budget) ಅಧಿವೇಶನ ಆರಂಭವಾಗಿದೆ. ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್ (Thawarchand Gehlot)​​ ಭಾಷಣ ಮಾಡಿದರು. ಶುಕ್ರವಾರ (ಫೆ.16) ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್​ ಮಂಡನೆ ಮಾಡಲಿದ್ದಾರೆ.

Exit mobile version