ಕಾರ್ಮಿಕ ನೀತಿ ತಿದ್ದುಪಡಿಗಳನ್ನು ವಿರೋಧಿಸಿ ಕಾರ್ಮಿಕರ ಪ್ರತಿಭಟನೆ

ವಿಜಯಪುರ, ನ. 26: ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಕೇಂದ್ರ ಸರ್ಕಾರದ ಕಾರ್ಮಿಕ, ರೈತ, ಜನ ವಿರೋಧಿ ನೀತಿಗಳನ್ನು ವಿರೋಧಿಸಿ, ಕಾರ್ಮಿಕ ಕಾನೂನು ತಿದ್ದುಪಡಿ ನಿಲ್ಲಿಸಲು ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಕೈಬಿಡಲು ಆಗ್ರಹಿಸಿ ಮುಷ್ಕರ ನಡೆಸಲಾಯಿತು. ಮುಷ್ಕರದ ಅಂಗವಾಗಿ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ವಿವಿಧ ಗುತ್ತಿಗೆ ಕಾರ್ಮಿಕರು, ದಿನಗೂಲಿ ನೌಕರರು, ರೈತ – ಕೃಷಿ ಕಾರ್ಮಿಕರು, ಆಶಾ ಕಾರ್ಯಕರ್ತರು, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು, ಹಮಾಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಗ್ರಾಮ ಪಂಚಾಯ್ತಿ ನೌಕರರು, ಮನೆಗೆಲಸ ಕಾರ್ಮಿಕರು ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ರೈತ ವಿರೋಧಿ ಕಾನೂನುಗಳನ್ನು ಹಾಗೂ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಹಿಂತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರವು ಹೊರಡಿಸಿರುವ ಸುಗ್ರೀವಾಜ್ಞೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಶಿಕ್ಷಣ, ಆರೋಗ್ಯ, ರೈಲ್ವೆ, ವಿದ್ಯುತ್, ದೂರಸಂಪರ್ಕ, ವಿಮಾ, ಬ್ಯಾಂಕ್ ಮತ್ತಿತರರ ಸಾರ್ವಜನಿಕ ವಲಯದ ಖಾಸಗಿಕರಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಆಶಾ, ಅಂಗನವಾಡಿ, ಬಿಸಿಯೂಟ ಸ್ಕೀಮ್ ಕಾರ್ಯಕರ್ತೆಯರಿಗೆ ಕಾರ್ಮಿಕ ಸ್ಥಾನ ನೀಡಬೇಕು. ₹ 21 ಸಾವಿರ ಕನಿಷ್ಠ ವೇತನ ನಿಗದಿಯಾಗಬೇಕು. ಗುತ್ತಿಗೆ ಕಾರ್ಮಿಕರ ಕಾಯಂಗೆ ಅಸ್ಸಾಂ ಹಾಗೂ ತಮಿಳುನಾಡು ಮಾದರಿಯಲ್ಲಿ ಶಾಸನ ರೂಪಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿಧಿ ಹೆಚ್ಚಿಸಿಬೇಕು. ಎನ್.ಪಿ.ಎಸ್ ರದ್ದುಮಾಡಿ ಮತ್ತು ಹಿಂದಿನ ಪಿಂಚಣಿ ಯೋಜನೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.  

Exit mobile version