ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವರು ವೀರರೂ ಅಲ್ಲ ಧೀರರೂ ಅಲ್ಲ: ರಾಜೀವ ಹೆಗಡೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (Karnataka Examination Authority) ಇದಕ್ಕಿಂತ ಬೇರೆ ಮಾತು ಹೇಳಲು ಸಾಧ್ಯವಿಲ್ಲ. ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವನ್ನು ಸೊಸೈಟಿ ಕಾಯ್ದೆಯಲ್ಲಿ ಆರಂಭಿಸಲಾಯಿತು. ಈ ಪ್ರಾಧಿಕಾರದ ಆರಂಭಿಕ ನಿರ್ದೇಶಕರ ಉದ್ದೇಶದ ಪ್ರಕಾರ ರಾಜ್ಯದಲ್ಲಿನ ಸಿಇಟಿ (CET) ಸೇರಿ ಇತರ ಪ್ರವೇಶ ಪರೀಕ್ಷೆಗಳನ್ನು ನಡೆಸುವುದು ಹಾಗೂ ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದಾಗಿತ್ತು. ಇದಕ್ಕೆ ಪೂರಕವೆಂಬಂತೆ ಸಿಇಟಿ ಹಾಗೂ ಪಿಯು ಪರೀಕ್ಷೆಗಳಿಗೆ ಚಂದನದಲ್ಲಿ ತರಬೇತಿ ತರಗತಿಗಳು ನಡೆದವು.

ಸರ್ಕಾರದ ನೇಮಕಾತಿಗೆ ಸಂಬಂಧಿಸಿ ಯಾವುದೇ ಕಾನೂನುಬದ್ಧ ಅಧಿಕಾರವಿಲ್ಲದಿದ್ದರೂ ಇಲಾಖಾ ಆದೇಶದ ಮೂಲಕ ನ್ಯಾಯಾಧೀಶರಿಂದ ಆರಂಭವಾಗಿ, ಪಿಎಸ್‌ಐ (PSI), ಉಪನ್ಯಾಸಕರು, ವೈದ್ಯರು, ಎಂಜಿನಿಯರ್‌ ಸೇರಿ ಸರ್ಕಾರದ ಎಲ್ಲ ಇಲಾಖೆಗಳ ನೇಮಕಾತಿಯನ್ನು ಕೆಇಎ (KEA) ಆರಂಭಿಸಿದೆ. ಆದರೆ ದಿನ ಕಳೆದಂತೆ ಈ ಪರೀಕ್ಷಾ ಪ್ರಾಧಿಕಾರವು ಕೆಪಿಎಸ್‌ಸಿಗೆ (KPSC) ಪರ್ಯಾಯವಾಗಿ ಕೆಲಸ ಮಾಡಲು ಆರಂಭಿಸಿದ್ದು, ಇದರೊಂದಿಗೆ ಕೆಪಿಎಸ್‌ಸಿಗೆ ಸಮಾನಂತರವಾಗಿ ಕೆಇಎ ಕೆಲಸ ಮಾಡುತ್ತಿದ್ದು, ಇಷ್ಟೆಲ್ಲ ಪ್ರಮುಖ ನೇಮಕಾತಿ ಮಾಡುವ ಪ್ರಾಧಿಕಾರಕ್ಕೆ ಕಾನೂನು, ಚೌಕಟ್ಟುಗಳೇ ಇಲ್ಲದಿದ್ದರೇ ಹೇಗೆ? ಇದನ್ನೆಲ್ಲ ಪ್ರಶ್ನೆ ಮಾಡುವ ಸೂಕ್ಷ್ಮ ಮನಸ್ಸುಗಳು ಈ ರಾಜ್ಯದಲ್ಲಿ ಕಳೆದು ಹೋದವೇ?

ಈ ತಿಂಗಳ ಆರಂಭದಲ್ಲೇ ಇದೇ ಕೆಇಎ ನಡೆಸಿದ ಪರೀಕ್ಷೆಗಳಲ್ಲಿ ಆರ್‌.ಡಿ ಪಾಟೀಲ್‌ (R D Patil) ನಡೆಸಿದ್ದಾನೆ ಎನ್ನಲಾದ ಅಕ್ರಮದ ವಾಸನೆಗಳಿನ್ನೂ ಮರೆಮಾಚುವ ಮುನ್ನ ಪಿಎಸ್‌ಐ ನೇಮಕಾತಿಯ ಜವಾಬ್ದಾರಿಯನ್ನು ಕೆಇಎ ಪಡೆದಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ಭಾರಿ ಸುದ್ದಿ ಮಾಡಿದ್ದ ಪಿಎಸ್‌ಐ ನೇಮಕಾತಿಯನ್ನು ಕೂಡ ಕೆಇಎಗೆ ನೀಡಲಾಗಿದೆ ಇಂದು ಕೆಲ ಸುದ್ದಿಗಳನ್ನು ನೋಡಿದೆ. ಹಿಂದಿನ ಪಿಎಸ್‌ಐ ಹಗರಣದಲ್ಲಿಯೂ ಇದೇ ಆರ್‌.ಡಿ ಪಾಟೀಲ್‌ ಹೆಸರಿತ್ತು ಎನ್ನುವುದನ್ನು ಮರೆಯಕೂಡದು.

ಹಾಗಿದ್ದರೂ ಇಷ್ಟೊಂದು ಪ್ರಮಾಣದ ನೇಮಕಾತಿಯ ಜವಾಬ್ದಾರಿಯನ್ನು ಯಾವ ಆಧಾರದಲ್ಲಿ ಕೆಇಎಗೆ ನೀಡಲಾಗುತ್ತಿದೆ. ಅಷ್ಟಕ್ಕೂ ಕೆಇಎಗೆ ಅಕ್ರಮ ಕೂಡ ಹೊಸತಲ್ಲ. ಈ ಹಿಂದಿನ ಸಿದ್ದರಾಮಯ್ಯ (Siddaramaiah) ಸರ್ಕಾರದ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳ ದಾಖಲೆಗಳನ್ನು ತಿದ್ದಿ ಎಂಜಿನಿಯರಿಂಗ್‌ (Engineering), ವೈದ್ಯ ಸೀಟು ಹಂಚಿಕೆ ಮಾಡಲಾಗಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧ್ಯಕ್ಷರು ಆಯಾ ಸರ್ಕಾರದ ಉನ್ನತ ಶಿಕ್ಷಣ ಸಚಿವರಾಗಿರುತ್ತಾರೆ. ಅಲ್ಲಿಗೆ ಈ ಪ್ರಾಧಿಕಾರವು ಸ್ವತಂತ್ರ ಅಥವಾ ಸ್ವಾಯತ್ತ ಸಂಸ್ಥೆಯಲ್ಲ.

ಇತ್ತೀಚೆಗೆ ಪರೀಕ್ಷಾ ಅಕ್ರಮದ ಕೂಗು ಕೂಡ ಕೇಳಿಬಂದಿದ್ದು, ಇವೆಲ್ಲದಕ್ಕಿಂತ ಈ ಪ್ರಾಧಿಕಾರದಲ್ಲಿ ಇರುವ ಉದ್ಯೋಗಿಗಳ ಆಡಿಟ್‌ನ್ನು ಒಮ್ಮೆ ಸರ್ಕಾರ ಮಾಡಬೇಕಿದೆ. ಇಷ್ಟೊಂದು ಸೂಕ್ಷ್ಮ ನೇಮಕಾತಿಗಳನ್ನು ನಡೆಸುವ ಪ್ರಾಧಿಕಾರದಲ್ಲಿ ಎಷ್ಟು ಜನ ಹೊರಗುತ್ತಿಗೆಯ ನೌಕರರಿದ್ದಾರೆ ಹಾಗೂ ಇನ್ನೆಷ್ಟು ನಿವೃತ್ತ ನೌಕರರಿಗೆ ಅಡ್ಡೆಯಾಗಿದೆ ಎನ್ನುವುದು ಕೂಡ ಹೊರಬರಬೇಕು. ಸರ್ಕಾರದ ಕಾನೂನು ಬದ್ಧ ಜವಾಬ್ದಾರಿ ಹಾಗೂ ಜುಟ್ಟು ಸಿಗದವರನ್ನು ಇರಿಸಿಕೊಂಡು ಇಷ್ಟೊಂದು ದೊಡ್ಡ ಪ್ರಮಾಣದ ಸರ್ಕಸ್‌ನ್ನು ಸರ್ಕಾರ ಯಾವ ನಂಬಿಕೆ ಮೇಲೆ ಮಾಡುತ್ತಿದೆ?

ಕೆಪಿಎಸ್‌ಸಿ ಯಾಕೆ?
ರಾಜ್ಯದಲ್ಲಿನ ವಿವಿಧ ಇಲಾಖೆಗಳ ನೇಮಕಾತಿಗೆ ಇರುವ ಸಂವಿಧಾನ ಬದ್ಧ ಸಂಸ್ಥೆಯೇ ಕರ್ನಾಟಕ ಲೋಕಸೇವಾ ಆಯೋಗ (Karnataka Public Service Commission). ಈ ಕೆಪಿಎಸ್‌ಸಿಗೆ ಸುಧಾರಣೆ ತರಬೇಕು ಎಂದು ಸಿದ್ದರಾಮಯ್ಯನವರು ಈ ಹಿಂದೆ ಹೂಟಾ ಸಮಿತಿ ಮಾಡಿದ್ದರು. ಆದರೆ ವ್ಯವಸ್ಥಿತವಾಗಿ ಕೆಪಿಎಸ್‌ಸಿಯನ್ನು ಇನ್ನಷ್ಟು ಹಾಳು ಮಾಡುವ ಕೆಲಸವನ್ನು ನಂತರ ಬಂದ ಸರ್ಕಾರಗಳೆಲ್ಲ ಮಾಡಿದವು. ಕೆಇಎ ಖಜಾನೆ ಹಾಗೂ ಅಲ್ಲಿಯ ಹುಳುಕನ್ನು ಚೆಂದವಾಗಿ ಅರ್ಥ ಮಾಡಿಕೊಂಡಿದ್ದ ಜನರಿಗೆ, ಕೆಪಿಎಸ್‌ಸಿ ಸುಧಾರಣೆ ಬಗ್ಗೆ ಆಸಕ್ತಿ ಇರಲಿಲ್ಲ. ಹೀಗಾಗಿ ಜನರಿಗೆ ಮಂಕು ಬೂದಿ ಅರಚಲು ಎಲ್ಲ ನೇಮಕಾತಿಯ ಕಡತಗಳು ಕೆಇಎನತ್ತ ಸಾಗಿದವು.

ಕೆಪಿಎಸ್‌ಸಿ ರೀತಿಯ ನೇಮಕವನ್ನೇ ಮಾಡುವ ಕೆಇಎನಲ್ಲಿ ಯಾವ ನಿರ್ದಿಷ್ಟ ನಿಯಮಗಳನ್ನು ರೂಪಿಸಿಕೊಳ್ಳಲಾಗಿದೆ? ಅ ನಿಯಮಗಳಿಗೆ ಸರ್ಕಾರ ಯಾವ ಕಾನೂನು ರೂಪಿಸಿದೆ ಎನ್ನುವುದನ್ನು ಸರ್ಕಾರ ಬಹಿರಂಗಪಡಿಸಲಿ. ಇಲ್ಲವಾದಲ್ಲಿ ವಿದ್ಯಾರ್ಥಿಗಳಿಗೆ ಸೀಮಿತವಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದ ಸಂಸ್ಥೆಯೊಂದು ಇನ್ನೊಂದು ಹೆಗ್ಗಣಗಳ ಗೂಡಾಗುತ್ತದೆ ಹುಷಾರ್‌. ಈ ಸರ್ಕಾರ ಹಾಗೂ ಆಡಳಿತದಲ್ಲಿದ್ದವರಿಗೆ ಪ್ರತಿಯೊಂದು ಸರ್ಕಾರಿ ಸಂಸ್ಥೆಗಳನ್ನು ಹೆಗ್ಗಣಗಳ ಗೋದಾಮು ಮಾಡಿ ಮುಚ್ಚುವುದು ಹಾಗೂ ಹೊಸ ಸಂಸ್ಥೆ ಕಟ್ಟುವುದರಲ್ಲಿ ತುಂಬಾ ಖುಷಿ ಇರುತ್ತದೆ. ಇಷ್ಟಕ್ಕೂ ಕೆಪಿಎಸ್‌ಸಿ, ಅದಕ್ಕೊಂದು ಅಧ್ಯಕ್ಷ, ಅಷ್ಟೊಂದು ದೊಡ್ಡ ಕಚೇರಿಯನ್ನು ವಿಧಾನಸೌಧದ (Vidhanasoudha) ಪಕ್ಕದಲ್ಲೇ ಏಕೆ ಸರ್ಕಾರ ಇರಿಸಿಕೊಂಡಿದೆ? ಅಲ್ಲಿ ಭ್ರಷ್ಟರಿದ್ದರೆ ಅವರನ್ನು ಹೊರಹಾಕಿ ಸರಿ ಮಾಡಿ. ಪರ್ಯಾಯ ಸಂಸ್ಥೆಗಳನ್ನು ಕಟ್ಟಿಕೊಂಡು ಕಟ್ಟುಪಾಡಿಲ್ಲದ ಜಾತ್ರೆ ಮಾಡಿಕೊಂಡು ಹೋಗುವ ಅಗತ್ಯವೇನಿದೆ?

ನೀಟ್ ಅನ್ಯಾಯಕ್ಕೆ ಕೆಇಎ ಕಾರಣ!
ಈ ಲೇಖನದ ಆರಂಭದಲ್ಲೇ ಒಂದು ವಚನವನ್ನು ಪ್ರಸ್ತಾಪಿಸಿದ್ದೆ. ಅದಕ್ಕೆ ಇನ್ನಷ್ಟು ಸ್ಪಷ್ಟತೆ ಈಗ ಕೊಡುತ್ತೇನೆ. ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆಗಳಿಂದಲೇ ಪರೀಕ್ಷಾ ಪ್ರಾಧಿಕಾರವು ಪ್ರತಿ ವರ್ಷ ನೂರಾರು ಕೋಟಿ ರೂಪಾಯಿಯನ್ನು ಸಂಗ್ರಹಿಸುತ್ತದೆ. ಈ ಹಣವನ್ನು ವಿದ್ಯಾರ್ಥಿಗಳ ಕಲ್ಯಾಣಕ್ಕೆ ಬಳಸಿ ಎಂದು ಹಿಂದಿನ ಅಧಿಕಾರಿಗಳಿಗೆ ಕೆಲ ಮಾಧ್ಯಮಗಳು ದುಂಬಾಲು ಬಿದ್ದು ಸಿಇಟಿ (CET) ತರಬೇತಿ ಆರಂಭವಾಗುವಂತೆ ಮಾಡಿದವು. ಈಗದು ಕೇವಲ ಕಾಟಾಚಾರಕ್ಕೆ ಸೀಮಿತವಾಗಿದೆ. ನೀಟ್‌ನಲ್ಲಿ ರಾಜ್ಯದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಭಾರಿ ಅನ್ಯಾಯವಾಗುತ್ತಿದೆ. ಅದೆಷ್ಟೋ ವಿಜ್ಞಾನ ಕಾಲೇಜುಗಳಿಗೆ ಪ್ರಯೋಗಾಲಯ ಸರಿಯಿಲ್ಲ ಎನ್ನುವುದಕ್ಕೆ ಈ ಅನುದಾನವನ್ನು ಸರ್ಕಾರ ಬಳಸಿಕೊಳ್ಳಬಹುದಿತ್ತು. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಕೆಲಸ ಮಾಡಬೇಕಿದ್ದ ಪರೀಕ್ಷಾ ಪ್ರಾಧಿಕಾರ ಅಕ್ಷರಶಃ, ಪರೀಕ್ಷೆ ಹಾಗೂ ನೇಮಕವನ್ನು ಮಾಡುವ ಉದ್ಯಮವಾಗಿ ಪರಿಣಮಿಸಿದೆ. ನೀಟ್‌ನಲ್ಲಿ (NEET) ರಾಜ್ಯದ ಬಡವರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವ ಆಸಕ್ತಿಯಿದ್ದರೆ ಈ ನಿಟ್ಟಿನಲ್ಲಿ ಕೆಲಸ ಮಾಡಬಹುದಿತ್ತು. ಆದರೆ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಿಂತ ಕಾನೂನು ಚೌಕಟ್ಟಿಲ್ಲದ ಕೆಲಸಗಳೇ ಇವರಿಗೆ ಹೆಚ್ಚು ಖುಷಿ ನೀಡುತ್ತದೆ. ಈ ಕೆಲಸವನ್ನು ಕೆಇಎ ಮಾಡಿದರೆ ದೊಡ್ಡ ʼಪರಿಶ್ರಮʼದಿಂದ ಹುಟ್ಟಿಕೊಂಡಿರುವ ಕೋಚಿಂಗ್‌ ಸೆಂಟರ್‌ಗಳು (Coaching Center) ಎಲ್ಲಿಗೆ ಹೋಗಬೇಕು ಹೇಳಿ.

ಗಂಜಿಕೇಂದ್ರವಾಗಿರುವ ಕೆಇಎ!
ವಿದ್ಯಾರ್ಥಿಗಳ ಕಲ್ಯಾಣವನ್ನು ಮರೆತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸರ್ಕಾರದ ದೊಡ್ಡ ಗಂಜಿ ಕೇಂದ್ರದಲ್ಲಿ ಒಂದಾಗಿದೆ. ಇಲ್ಲಿರುವ ಹಣದ ಮೇಲೆ ಪ್ರತಿಯೊಬ್ಬರಿಗೂ ಕಣ್ಣಿದೆ. ಹೀಗಾಗಿ ಇಲ್ಲಿಂದ ಸಾಕಷ್ಟು ಸಚಿವರ ಆಪ್ತ ಕಾರ್ಯದರ್ಶಿಗಳ ಸಂಬಳ, ಕಾರು ಹಾಗೂ ಇತರ ಭತ್ಯೆ ನಿರಂತರವಾಗಿ ಸಂದಾಯವಾಗುತ್ತದೆ.

ಕೊನೆಯದಾಗಿ: ಕೆಪಿಎಸ್‌ಸಿಯನ್ನು ಮುಚ್ಚಿ ಎಲ್ಲ ಅಧಿಕಾರವನ್ನು ಕೆಇಎಗೆ ಕೊಟ್ಟುಬಿಡಿ. ಅದರ ಜತೆಗೆ ಈ ಪ್ರಾಧಿಕಾರಕ್ಕೆ ಕಾನೂನು ಬದ್ಧ ಚೌಕಟ್ಟು ನಿರ್ಮಿಸಿ. ಪರೀಕ್ಷೆ ನಡೆಸುವ, ಫಲಿತಾಂಶ ಕೊಡುವ ಹಾಗೂ ಇತರ ವಿಚಾರಗಳಲ್ಲಿ ಸ್ಪಷ್ಟ ಕಾನೂನು ರಚಿಸಿ. ಇಲ್ಲವಾದಲ್ಲಿ ಕೆಪಿಎಸ್‌ಸಿಯನ್ನು ಸದೃಢಗೊಳಿಸಿ, ಕೆಇಎಯನ್ನು ವಿದ್ಯಾರ್ಥಿಗಳ ಪರೀಕ್ಷೆಗೆ ಸೀಮಿತಗೊಳಿಸಿ. ಇಲ್ಲವಾದಲ್ಲಿ ವಿದ್ಯಾರ್ಥಿಗಳ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಕೂಡ ಈ ಕೆಇಎ ದೊಡ್ಡ ಹಗರಣವನ್ನಾಗಿ ಮಾಡುತ್ತದೆ. ಶಿಕ್ಷಣಾಸಕ್ತರು ಈ ಬಗ್ಗೆ ಎಚ್ಚರವಹಿಸಿ.

ರಾಜೀವ ಹೆಗಡೆ

Exit mobile version