ಕೆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ : ಪ್ರಾಥಮಿಕ ವೈದ್ಯಕೀಯ ವರದಿ!

KK

ಕೆಕೆ(KK) ಎಂದೇ ಖ್ಯಾತರಾಗಿದ್ದ ಗಾಯಕ(Singer) ಕೃಷ್ಣಕುಮಾರ್ ಕುನ್ನತ್(Krishnakumar Kunnath) ಅವರು ತೀವ್ರ ಹೃದಯಾಘಾತದಿಂದ(Cardiac Arrest) ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಕೋಲ್ಕತ್ತಾ(Kolkata) ಪೊಲೀಸರಿಗೆ ನೀಡಿದ ಪ್ರಾಥಮಿಕ ವರದಿಯಲ್ಲಿ, SSKM ಆಸ್ಪತ್ರೆಯು ಗಾಯಕ ಸಾಮಾನ್ಯವಾಗಿ ಹೃದಯಾಘಾತ ಎಂದು ಕರೆಯಲ್ಪಡುವ ‘ಮಯೋಕಾರ್ಡಿಯಲ್ ಇನ್ಫಾರ್ಕ್ಷನ್’ ನಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಪ್ರಾಥಮಿಕ ವರದಿಯು, ಸಾವಿಗೆ ಸಂಬಂಧಿಸಿದಂತೆ ಅಸ್ವಾಭಾವಿಕ ಯಾವುದನ್ನೂ ಸೂಚಿಸಿಲ್ಲ. ಈ ಹಿಂದೆ, ಕೋಲ್ಕತ್ತಾ ಪೊಲೀಸರು ಕೆಕೆ ಅವರ ಸಾವಿನ ಬಗ್ಗೆ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿದ್ದರು.

ಪೊಲೀಸ್ ಮೂಲಗಳ ಪ್ರಕಾರ, ಅವರ ಮುಖ ಮತ್ತು ತಲೆಗೆ ಗಾಯಗಳಾಗಿತ್ತು ಎಂದು ಹೇಳಲಾಗಿತ್ತು. ಗಾಯಕ, ಮಂಗಳವಾರ, ಮೇ 31 ರಂದು, ಕೋಲ್ಕತ್ತಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗಿದ ನಂತರ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರ್ಯಾಂಡ್ ಹೋಟೆಲ್‌ನಲ್ಲಿ ಕುಸಿದು ಬಿದ್ದರು ಮತ್ತು ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ತದನಂತರ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಯಿತು.

ಅಂತಿಮ ಶವಪರೀಕ್ಷೆ ವರದಿಯನ್ನು 72 ಗಂಟೆಗಳಲ್ಲಿ ಪ್ರಕಟಿಸಲಾಗುವುದು ಎಂದು ಹೇಳಲಾಗಿದ್ದು, ಈ ಮಧ್ಯೆ ಕೆಕೆ ಅವರ ಸಂಗೀತ ಕಚೇರಿಯಲ್ಲಿ ಭಾಗವಹಿಸಿದ್ದ ಹಲವಾರು ಜನರು ಸಭಾಂಗಣವು ಕಿಕ್ಕಿರಿದು ತುಂಬಿತ್ತು ಮತ್ತು ತಾಪಮಾನ ಅಧಿಕವಾಗಿತ್ತು ಎಂದು ಹೇಳಿದರು. ಕೆಕೆ ಅವರ ವೀಡಿಯೊದಲ್ಲಿ, ವಿಪರೀತವಾಗಿ ಬೆವರುವುದು ಮತ್ತು ಉಷ್ಣಾಂಶದ ಬಗ್ಗೆ ಹೇಳುತ್ತಿರುವುದು ಕಂಡುಬಂದಿದೆ. ಕೆಕೆ ಅವರ ನಿಧನದ ಹಿನ್ನಲೆ ಅನೇಕ ಚಿತ್ರನಟರು, ಗಣ್ಯರು ಟ್ವಿಟರ್‌ ಮೂಲಕ ಸಂತಾಪ ಸೂಚಿಸಿದರು.

ಕೆಕೆ ಅವರ ಸಾವಿಗೆ ಅಭಿಮಾನಿಗಳು ಸಂತಾಪ ಸೂಚಿಸಿದ್ದು, ಅವರ ಹಠಾತ್ ಸಾವಿನ ಬಗ್ಗೆ ಆಘಾತ ಮತ್ತು ಅಪನಂಬಿಕೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಕೆಕೆ ಎಂದೇ ಖ್ಯಾತರಾಗಿರುವ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನಾಥ್ ಅವರ ಅಕಾಲಿಕ ನಿಧನದಿಂದ ದುಃಖವಾಗಿದೆ. ಅವರ ಹಾಡುಗಳು ಎಲ್ಲಾ ವಯೋಮಾನದ ಜನರ ಮನಸೂರೆಗೊಂಡಂತೆ ವ್ಯಾಪಕವಾದ ಭಾವನೆಗಳನ್ನು ಪ್ರತಿಬಿಂಬಿಸುತ್ತವೆ. ನಾವು ಅವರನ್ನು ಯಾವಾಗಲೂ ಅವರ ಹಾಡುಗಳ ಮೂಲಕ ಸ್ಮರಿಸುತ್ತೇವೆ.

ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು, ಓಂ ಶಾಂತಿ” ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

Exit mobile version