ಕುಮಾರಣ್ಣ ಭರ್ಜರಿ ಬ್ಯಾಟಿಂಗ್ ; ಇತ್ತ ‘ಕೈ’ನಲ್ಲಿ ತಳಮಳ!

KUMARSWAMY

ಮುಂಬರುವ ವಿಧಾನಸಭಾ ಚುನಾವಣೆಗೆ(Vidhansabha Election) ರಾಜ್ಯದಲ್ಲಿ ಮೂರು ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ತಮ್ಮದೇ ಆದ ರಣತಂತ್ರಗಳ ಮೂಲಕ ಮತದಾರರನ್ನು ಸೆಳೆಯಲು ಮೂರು ಪಕ್ಷಗಳು ಕಸರತ್ತು ನಡೆಸಿವೆ. ಆದರೆ ಮುಂಬರುವ ವಿಧಾನಸಭಾ ಚುನಾವಣೆ ಅಭಿವೃದ್ದಿ ಕೇಂದ್ರಿತವಾಗಿರದೇ, ಭಾವನಾತ್ಮಕ ವಿಷಯ ಕೇಂದ್ರಿತವಾಗಿರಲಿದೆ ಎಂಬುದು ಸ್ಪಷ್ಟವಾಗುತ್ತಿದೆ.

ಬಿಜೆಪಿ(BJP) ಎಂದಿನಂತೆ ತನ್ನ ಬತ್ತಳಿಕೆಯಲ್ಲಿರುವ ಪ್ರಬಲ ‘ಹಿಂದುತ್ವ’ ಅಸ್ತ್ರವನ್ನು ಪ್ರಯೋಗಿಸಲು ಈಗಾಗಲೇ ವೇದಿಕೆ ಸಿದ್ದಪಡಿಸಿಕೊಂಡಿದೆ. ಆ ಮೂಲಕ ಹಿಂದೂ ಮತಬ್ಯಾಂಕ್‍ನ್ನು ಒಗ್ಗೂಡಿಸುವ ಕೆಲಸವನ್ನು ಬಿಜೆಪಿ ತೆರೆಮರೆಯಲ್ಲಿ ನಡೆಸುತ್ತಿದೆ. ಇನ್ನು ಬಿಜೆಪಿಯ ‘ಹಿಂದುತ್ವ’ ಅಸ್ತ್ರಕ್ಕೆ ಪ್ರತಿಯಾಗಿ ‘ಜಾತ್ಯಾತೀತ’ ಅಸ್ತ್ರ ಪ್ರಯೋಗಿಸುತ್ತಿದ್ದ ಕಾಂಗ್ರೆಸ್(Congress) ತನ್ನ ‘ಜಾತ್ಯಾತೀತ’ ನಿಲುವಿನಿಂದ ಸ್ವಲ್ಪ ಹಿಂದೆ ಸರಿದಿದೆ. ಹಿಜಾಬ್, ಹಲಾಲ್ ವಿವಾದಗಳಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಆ ಮೂಲಕ ಅಲ್ಪಸಂಖ್ಯಾತರ ಕೆಂಗಣ್ಣಿಗೂ ಗುರಿಯಾಗಿದೆ.

ಇನ್ನು ಹಿಜಾಬ್ ಮತ್ತು ಹಲಾಲ್ ಸೇರಿದಂತೆ ಬಿಜೆಪಿ ಪ್ರಯೋಗಿಸಿದ ಅಸ್ತ್ರಗಳಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದ್ದನ್ನೇ ಬಂಡವಾಳ ಮಾಡಿಕೊಂಡ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿಯವರು ಅಲ್ಪಸಂಖ್ಯಾತರ ಮತಬ್ಯಾಂಕ್‍ಗೆ ಕೈ ಹಾಕಿದ್ದಾರೆ. ಮುಸ್ಲಿಮರ ಪರ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಅಲ್ಪಸಂಖ್ಯಾತರ ಮತ ಸೆಳೆಯಲು ಭಾರೀ ಪ್ರಯತ್ನಗಳನ್ನು ನಡೆಸಿದ್ದಾರೆ. ಕುಮಾರಣ್ಣನ ಈ ತಂತ್ರದಿಂದ ಕಾಂಗ್ರೆಸ್ ಕಂಗಾಲಾಗಿದೆ. ಅಲ್ಪಸಂಖ್ಯಾತರ ಮತಗಳನ್ನೇ ನೆಚ್ಚಿಕೊಂಡಿರುವ ಕಾಂಗ್ರೆಸ್‍ಗೆ ಕುಮಾರಣ್ಣನ ಈ ತಂತ್ರದಿಂದ ಭಾರೀ ನಷ್ಟವಾಗಲಿದೆ ಎನ್ನುವುದು ರಾಜಕೀಯ ತಜ್ಞರ ಲೆಕ್ಕಾಚಾರ.

ಶೇಕಡಾ 10-15ರಷ್ಟು ಅಲ್ಪಸಂಖ್ಯಾತರ ಮತಗಳನ್ನು ಜೆಡಿಎಸ್ ಪಡೆದರೆ ಕಾಂಗ್ರೆಸ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 60ರ ಗಡಿ ದಾಟುವುದು ಕಷ್ಟವಾಗಲಿದೆ. ಹೀಗಾಗಿಯೇ ಕಾಂಗ್ರೆಸ್‍ನಲ್ಲಿ ಇದೀಗ ತಳಮಳ ಶುರುವಾಗಿದೆ. ಇನ್ನು ಹಳೇ ಮೈಸೂರು ಭಾಗದಲ್ಲಿ ಪ್ರಬಲ ಒಕ್ಕಲಿಗ ಮತ್ತು ಅಲ್ಪಸಂಖ್ಯಾತರ ಮತಗಳು ಜೆಡಿಎಸ್ ಪಾಲಾದರೆ ಕಾಂಗ್ರೆಸ್ ಹೀನಾಯ ಸ್ಥಿತಿ ತಲುಪಲಿದೆ. ಹಳೇ ಮೈಸೂರು ಭಾಗದ ಎಲ್ಲ ಜಿಲ್ಲೆಗಳಲ್ಲಿ ಜೆಡಿಎಸ್ ಒಕ್ಕಲಿಗ ಮತಬ್ಯಾಂಕ್ ಮೇಲೆ ಪ್ರಬಲ ಹಿಡಿತ ಹೊಂದಿದೆ.

ಇದಕ್ಕೆ ಅಲ್ಪಸಂಖ್ಯಾತ ಮತಗಳು ಸೇರ್ಪಡೆಯಾದರೆ ಜೆಡಿಎಸ್ ಪಕ್ಷದ ಶಕ್ತಿ ವೃದ್ದಿಸಲಿದೆ. ಕರಾವಳಿ ಭಾಗದಲ್ಲಿ ಬಿಜೆಪಿ ಏಕಸ್ವಾಮ್ಯ ಹೊಂದಿದೆ. ಇನ್ನು ಮಧ್ಯಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಆದರೆ ಲಿಂಗಾಯತ ಸಮುದಾಯ ಬಿಜೆಪಿಯನ್ನು ಬೆಂಬಲಿಸುವುದರಿಂದ ಬಿಜೆಪಿಗೆ ಈ ಭಾಗಗಳಲ್ಲಿ ಪ್ಲಸ್ ಆಗಲಿದೆ. ಒಟ್ಟಾರೆಯಾಗಿ ಸದ್ಯದ ರಾಜಕೀಯ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್ ಸ್ವಲ್ಪ ಮಂಕಾದಂತೆ ಕಾಣುತ್ತಿದೆ.

Exit mobile version