ಜನಸೇವೆಗೆ ಅನುಮತಿ ನೀಡಲಿ, ನಾವೂ ಸರಕಾರದ ಜತೆ ಕೈಜೋಡಿಸುತ್ತೇವೆ; ಡಿ.ಕೆ ಶಿವಕುಮಾರ್

ಬೆಂಗಳೂರು, ಮೇ. 17: ರಾಜ್ಯದ ಜನರಿಗೆ ಉಚಿತವಾಗಿ ಲಸಿಕೆ ನೀಡಲು ಕಾಂಗ್ರೆಸ್ ರೂಪಿಸಿರುವ 100 ಕೋಟಿ ರೂ. ಯೋಜನೆಗೆ ಸರ್ಕಾರ ಅನುಮತಿ ನೀಡಿದರೆ, ನಾವೂ ಸರ್ಕಾರದೊಂದಿಗೆ ಕೈಜೋಡಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಜನರ ಜೀವ ಉಳಿಸುವುದು ಮುಖ್ಯವಾಗಿದ್ದು, ಅದೇ ನಮ್ಮ ಮೊದಲ ಆದ್ಯತೆ. ಅಭಿವೃದ್ಧಿ ಕಾರ್ಯಗಳನ್ನು ನಂತರ ಮಾಡಿಕೊಳ್ಳೋಣ. ಹೀಗಾಗಿ ಕಾಂಗ್ರೆಸ್ ನಾಯಕರೆಲ್ಲರೂ ಸೇರಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ಹಣವನ್ನು ಕೋವಿಡ್ 19 ಲಸಿಕೆಗೆ ಬಳಸಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದರು.

ಅಲ್ಲದೇ, ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ. ಶಾಸಕರ ನಿಧಿಯ 2 ಕೋಟಿ ರೂ.ನಲ್ಲಿ ಶೇ.25 ರಷ್ಟು ಅನುದಾನ ಬಳಸಿಕೊಳ್ಳಲು ಸರ್ಕಾರ ಹೇಳಿದೆ. ಹಾಸಿಗೆ, ವೆಂಟಿಲೇಟರ್ ಖರೀದಿಗೆ ಬಳಸಲು ಅನುಮತಿ ಇದೆ. ಹೀಗಾಗಿ ನಾವು 100 ಕೋಟಿ ಮೊತ್ತದ ಕಾರ್ಯಕ್ರಮ ರೂಪಿಸಿ, ಸರ್ಕಾರದ ಅನುಮತಿ ಕೋರಿದ್ದೇವೆ.

ನಮ್ಮಲ್ಲಿ ಒಟ್ಟು 93 ಶಾಸಕರು ಹಾಗೂ ಪರಿಷತ್ ಸದಸ್ಯರಿದ್ದು, ಉಳಿದ ಮೊತ್ತವನ್ನು ನಮ್ಮ ಕಾರ್ಯಕರ್ತರ ಬಳಿ ಭಿಕ್ಷೆ ಎತ್ತಾದರೂ ಸಂಗ್ರಹಿಸುತ್ತೇವೆ. ಈ ಜನಪರ ಕೆಲಸಕ್ಕೆ ಸರ್ಕಾರ ಅನುಮತಿ ನೀಡಲಿ. ನಾವು ಕೂಡ ಸರ್ಕಾರದ ಜತೆ ಕೈ ಜೋಡಿಸಿ ಜನ ಸೇವೆ ಮಾಡುತ್ತೇವೆ ಎಂದು ತಿಳಿಸಿದರು.

Exit mobile version