ಬೆಂಗಳೂರು, ಹಾಸನ, ಚಿತ್ರದುರ್ಗ ಸೇರಿದಂತೆ ಹಲವೆಡೆ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ದಾಳಿ

Karnataka: ಅ. 30ರ ಸೂರ್ಯ ಉದಯಿಸುವ ಮುನ್ನವೇ ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂ ನಗರದಲ್ಲಿರುವ ಇಬ್ಬರು ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಚಿತ್ರದುರ್ಗದಲ್ಲಿ ಅರಣ್ಯಾಧಿಕಾರಿಯಾಗೆ ಸೇವೆ ಸಲ್ಲಿಸುತ್ತಿರುವ ಎಸಿಎಫ್ ನಾಗೇಂದ್ರ ನಾಯ್ಕ್ (ACF Nagendra Naik) ಹಾಗೂ ಚಿತ್ರದುರ್ಗದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿರುವ ಕೃಷ್ಣಮೂರ್ತಿ ಅವರ ಮನೆಗಳ ಮೇಲೆ ರೈಡ್ ನಡೆಸಲಾಗಿದೆ.

ಅಧಿಕಾರಿಗಳ ಎರಡು ತಂಡಗಳು ಪ್ರತ್ಯೇಕವಾಗಿ ದಾಳಿಗಳನ್ನು ನಡೆಸಿದ್ದು ಇಬ್ಬರೂ ಅಧಿಕಾರಿಗಳ ಮನೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಚಿತ್ರದುರ್ಗದ ಲೋಕಾಯುಕ್ತ (Lokayutha) ಎಸ್ಪಿ ವಾಸುದೇವ ರಾವ್ ನೇತೃತ್ವದಲ್ಲಿ ಈ ಎರಡೂ ದಾಳಿ ನಡೆಸಲಾಗಿದ್ದು, ಅಷ್ಟೇ ಅಲ್ಲದೆ ಬೆಂಗಳೂರು ಗ್ರಾಮಾಂತರ, ಹಾಸನ, ಹಾವೇರಿ (Haveri) , ಕಲಬುರಗಿ, ದಾವಣಗೆರೆಯಲ್ಲೂ ಬೆಳಗಿನ ಜಾವ ಲೋಕಾಯುಕ್ತ ದಾಳಿ ನಡೆಸಲಾಗಿದೆ.

ಹಿರಿಯೂರು ನಗರದ ಚಂದ್ರಾಲೇಔಟ್ (Chandra Layout) ನಲ್ಲಿರುವ ಅರಣ್ಯ ಇಲಾಖೆ ಎಸಿಎಫ್ ನಾಗೇಂದ್ರ ನಾಯ್ಕ್ ಅವರಿಗೆ ಸೇರಿದ ಮನೆಗೆ ಒಂದು ತಂಡ ಆಗಮಿಸಿದ್ದರೆ. ಮತ್ತೊಂದೆಡೆ ತವಂದಿ ಗ್ರಾಮದ ಬಳಿಯ ನಾಯ್ಕ್ ಅವರಿಗೆ ಸೇರಿದ್ದೆನ್ನಲಾಗಿರುವ ಫಾರ್ಮ್ ಹೌಸ್ ಗೆ (Farm House) ಎರಡನೇ ತಂಡ ಹೋಗಿದೆ. ಸಮಾಜ ಕಲ್ಯಾಣ ಇಲಾಖೆಯ ಅಸಿಸ್ಟೆಂಟ್ ಡೈರೆಕ್ಟರ್ ಕೃಷ್ಣಮೂರ್ತಿ ಮನೆ ಮೇಲೆ ಅಧಿಕಾರಿಗಳ ಮತ್ತೊಂದು ತಂಡ ದಾಳಿ ನಡೆಸಿದ್ದು, ಇದೇ ಅಧಿಕಾರಿಗೆ ಸೇರಿದ್ದೆನ್ನಲಾಗಿರುವ ಹಿರಿಯೂರು ನಗರದ ಕುವೆಂಪು ನಗರದ ಮನೆ ಮೇಲೆ ದಾಳಿ ನಡೆಸಲಾಗಿದೆ.

ಬೆಂಗಳೂರು:
ಬೆಂಗಳೂರಿನ ಕೆ.ಆರ್. ಪುರಂನಲ್ಲಿರುವ (K.R.Puram) ಮೂವರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ ಎಂಬ ಮಾಹಿತಿಯಿದ್ದು, ಹಾಸನದಲ್ಲಿ ಕೆಪಿಟಿಸಿಎಲ್ ಜೂನಿಯರ್ ಇಂಜಿನಿಯರ್ ಎಚ್.ಇ. ನಾರಾಯಣ, ಹಾವೇರಿಯಲ್ಲಿ ಅರಣ್ಯ ಇಲಾಖೆಯ ಇಬ್ಬರು ಅಧಿಕಾರಿಗಳಾದ ಆರ್ ಎಫ್ ಒ ಪರಮೇಶ್ವಪ್ಪ ಪೇರಲನವರ್, ನ್ಯಾಮತಿ ಆರ್ ಎಫ್ ಒ ಮಾಲತೇಶ್; ಕಲಬುರಗಿಯಲ್ಲಿ ಬೀದರ್ ವಲಯ ಅರಣ್ಯಾಧಿಕಾರಿ ಬಸವರಾಜ್ ಡಾಂಗೆ ಹಾಗೂ ದೇವದುರ್ಗದ ಕೃಷ್ಣಾ ಭಾಗ್ಯ ಜಲನಿಗಮ ಲಿಮಿಟೆಡ್ (ಕೆಬಿಜೆಎನ್ ಎಲ್) ಸಂಸ್ಥೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಪ್ಪಣ್ಣ ಅನ್ನದಾನಿ ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಹಾವೇರಿ:
ಹಾವೇರಿಯ ಶಿವಾಜಿ ನಗರ (Shivajinagar) , ದಾನೇಶ್ವರಿ ಪಾರ್ಕ್, ದಾನಮ್ಮ ದೇವಿ ದೇವಸ್ಥಾನದ ಬಳಿ ಇರುವ, ಆರ್ ಎಫ್ ಒ ಪರಮೇಶಪ್ಪ ಪೇರಲನವರ್ ಹಾಗೂ ನ್ಯಾಮತಿ ಆರ್ ಎಫ್ ಒ ಮಾಲತೇಶ್ ಅವರ ಮನೆಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ಇಬ್ಬರೂ ಅಧಿಕಾರಿಗಳಿಗೆ ಸೇರಿದ ಸುಮಾರು 9 ಕಡೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಈ ದಾಳಿಯನ್ನು ದಾವಣಗೆರೆ ಲೋಕಾಯುಕ್ತ ಎಸ್ಪಿಯವರ ನೇತೃತ್ವದಲ್ಲಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಾಸನ:
ಹಾಸನದ ಹೊರವಲಯದಲ್ಲಿರುವ ಬೊಮ್ಮನಾಯಕನ ಹಳ್ಳಿಯಲ್ಲಿರುವ ಎಚ್.ಇ. ಸತ್ಯನಾರಾಯಣ ಅವರ ನಾರಾಯಣ ನಿವಾಸ ಎಂಬ ಮನೆಯ ಮೇಲೆ ಹಾಗೂ ಗೊರೂರಿನಲ್ಲಿರುವ ಅವರ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ. ಲೋಕಾಯುಕ್ತ ರೈಡ್ ಅನ್ನು ಜಿಲ್ಲೆಯ ಲೋಕಾಯುಕ್ತ ಎಸ್ಪಿ ಮಲ್ಲಿಕ್(Mallika) , ಡಿವೈಎಸ್ ಪಿ ತಿರುಮಲೇಶ್, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಬಾಲು ಹಾಗೂ ಶಿಲ್ಪಾ ನೇತೃತ್ವದಲ್ಲಿ ಈ ರೈಡ್ ಸಂಯೋಜಿಸಲಾಗಿದೆ.

ಕಲ್ಬುರ್ಗಿ:
ಜಿಲ್ಲೆಯ ಲೋಕಾಯುಕ್ತ ಎಸ್ಪಿ ಎಸ್.ಎಸ್. ಕರ್ನೂಲ್ (S.S.Kurnool) ಅವರು ಕಲ್ಬುರ್ಗಿಯಲ್ಲಿ ನಡೆದ ಎರಡು ದಾಳಿಗಳ ನೇತೃತ್ವವನ್ನು ವಹಿಸಿಕೊಂಡಿದ್ದು, ಬೀದರ್ ಜಿಲ್ಲೆಯ ಅರಣ್ಯಾಧಿಕಾರಿ ಬಸವರಾಜ ಡಾಂಗೆ, ದೇವದುರ್ಗದ ಕೃಷ್ಣಾ ಭಾಗ್ಯ ಜಲನಿಗಮ ಲಿಮಿಟೆಡ್ (ಕೆಬಿಜೆಎನ್ ಎಲ್) ಸಂಸ್ಥೆಯ ಎಲ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿರುವ ತಿಪ್ಪಣ್ಣ ಅನ್ನದಾನಿಯವರ ನಿವಾಸಗಳ ಮೇಲೆ ರೈಡ್ ನಡೆಸಲಾಗಿದ್ದು, ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಭವ್ಯಶ್ರೀ ಆರ್.ಜೆ

Exit mobile version