ಮಧ್ಯಂತರ ಆದೇಶದ ನಂತರ ಗೈರಾದವರಿಗೆ ಮರುಪರೀಕ್ಷೆ ಇಲ್ಲ : ಮಾಧುಸ್ವಾಮಿ!

madhuswamy

ಹಿಜಾಬ್(Hijab) ಕುರಿತು ಹೈಕೋರ್ಟ್(Highcourt) ನೀಡಿದ್ದ, ಮಧ್ಯಂತರ ಆದೇಶವನ್ನು ಉಲ್ಲಂಘಿಸಿ ಪರೀಕ್ಷೆಗೆ(Exam) ಹಾಜರಾಗದ ವಿದ್ಯಾರ್ಥಿಗಳಿಗೆ(Students) ಮರು ಪರೀಕ್ಷೆಯನ್ನು(Re-Exam) ನಡೆಸುವುದಿಲ್ಲ. ಆದರೆ ಮಧ್ಯಂತರ ಆದೇಶಕ್ಕೂ ಮುನ್ನ ಗೊಂದಲಗಳಿಂದ ಕೆಲ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿರುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಮರುಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುತ್ತೇವೆ ಎಂದು ಕಾನೂನು ಸಚಿವ ಮಾಧುಸ್ವಾಮಿ ವಿಧಾನಸೌಧದ ಕಲಾಪದಲ್ಲಿ ಹೇಳಿದರು.

ಹೈಕೋರ್ಟ್‍ನ ಏಕಸದಸ್ಯ ಪೀಠ ಮಧ್ಯಂತರ ಆದೇಶವನ್ನು ನೀಡಿದ ನಂತರವೂ ಪರೀಕ್ಷೆಗೆ ಹಾಜರಾಗದವರು, ನೇರವಾಗಿ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ. ನ್ಯಾ. ಕೃಷ್ಣ ಎಸ್. ದೀಕ್ಷಿತ್, “ನಾವು ಅಂತಿಮ ಆದೇಶ ನೀಡುವವರೆಗೂ ಎಲ್ಲ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಗುರುತನ್ನು ಧರಿಸಿ ಶಾಲಾ-ಕಾಲೇಜಿಗೆ ಹಾಜರಾಗಬಾರದು” ಎಂದು ಮಧ್ಯಂತರ ಆದೇಶ ನೀಡಿದ್ದರು. ಆದರೆ ಕೆಲ ವಿದ್ಯಾರ್ಥಿಗಳು ಹೈಕೋರ್ಟ್ ಆದೇಶಕ್ಕೆ ಬೆಲೆ ನೀಡದೆ, ಪರೀಕ್ಷೆಗೆ ಹಾಜರಾಗಿಲ್ಲ. ಹೀಗಾಗಿ ಅಂತಹ ವಿದ್ಯಾರ್ಥಿಗಳನ್ನು ಮರುಪರೀಕ್ಷೆಗೆ ಪರಿಗಣಿಸುವುದಿಲ್ಲ.

ಹೀಗೆ ಮರುಪರೀಕ್ಷೆ ನಡೆಸುತ್ತಾ ಹೋದರೆ ಉಳಿದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಉಂಟಾಗುತ್ತದೆ. ಪದೇ ಪದೇ ಪರೀಕ್ಷೆ ನಡೆಸುವ ಆಯ್ಕೆ ನಮ್ಮ ಮುಂದಿಲ್ಲ ಎಂದು ಮಾಧುಸ್ವಾಮಿ ಹೇಳಿದ್ದಾರೆ. ಇನ್ನು ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸುವ ಕುರಿತು ಸರ್ಕಾರ ಮತ್ತು ಶಿಕ್ಷಣ ಇಲಾಖೆ ಸೂಕ್ತ ನಿರ್ಧಾರವನ್ನು ಶೀಘ್ರವೆ ಕೈಗೊಳ್ಳಬೇಕು. ಹೈಕೋರ್ಟ್ ಅಂತಿಮ ಆದೇಶ ನೀಡಿದ್ರು, ಅದನ್ನು ಉಲ್ಲಂಘನೆ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲು ಸೂಕ್ತ ಕ್ರಮ ಕೈಗೊಳ್ಳಬೇಕು. ಕೋರ್ಟ್ ಅಂತಿಮ ಆದೇಶ ನೀಡಿದರು, ಕಾಲೇಜುಗಳ ಎದುರು ಪ್ರತಿಭಟನೆ ಮಾಡುತ್ತಾ, ಕಾಲೇಜಿನ ವಾತಾವರಣ ಹಾಳು ಮಾಡುವ ಕೆಲ ವಿದ್ಯಾರ್ಥಿಗಳ ವಿರುದ್ದವೂ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಇನ್ನು ಯು.ಟಿ. ಖಾದರ್ ಮಾತನಾಡಿ, ‘ಎಲ್ಲ ವಿದ್ಯಾರ್ಥಿಗಳು ನಿಮ್ಮ ಮಕ್ಕಳಿದಂತೆ, ಅವರ ಭವಿಷ್ಯದ ಹಿತದೃಷ್ಟಿಯಿಂದ ಅವರಿಗೆ ಮರುಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್, ಹೈಕೋರ್ಟ್ ಅಂತಿಮ ಆದೇಶ ನೀಡಿದ ಬಳಿಕವೂ, ಪ್ರತಿಭಟನೆ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ಕೋರ್ಟ್ ಆದೇಶಕ್ಕೂ ಬೆಲೆ ಕೊಡದವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು. ಹೈಕೋರ್ಟ್ ತೀರ್ಪಿನ ವಿರುದ್ದ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಹೋಗಲಿ, ಅದನ್ನು ಬಿಟ್ಟು ಪ್ರತಿಭಟನೆ ಮಾಡುವುದು ಒಳ್ಳೆಯದಲ್ಲ ಎಂದು ಹೇಳಿದರು.

ಶೆಟ್ಟರ್ ಮಾತಿಗೆ ಆಕ್ಷೇಪಿಸಿದ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೋರ್ಟ್ ಆದೇಶದ ಕುರಿತು ಅವರಿಗೆ ಅಸಮಾಧಾನವಿದ್ದರೆ, ಶಾಂತಿಯುತವಾಗಿ ಪ್ರತಿಭಟನೆ ಮಾಡುವ ಹಕ್ಕು ಅವರಿಗಿದೆ. ಅವರು ಮಾಡುವ ಶಾಂತಿಯುತ ಪ್ರತಿಭಟನೆಯನ್ನು ನೀವು ಹೇಗೆ ತಡೆಯುತ್ತೀರಿ ಎಂದರು.

Exit mobile version