ನಿಂತಿಲ್ಲ ಮಾರ್ಷಲ್‌ಗಳ ಮಾಸ್ಕ್ ದರ್ಪ! ಜನಸಾಮಾನ್ಯರನ್ನು ಕಾಡ್ತಿದ್ದಾರೆ ಮಾರ್ಷಲ್‌ಗಳು. ಲಂಚ ಕೊಟ್ರೆ ಮಾಸ್ಕ್ ಹಾಕದಿದ್ರೂ ಮಾಫ್ ಆಗುತ್ತೆ ದಂಡ. ಮುಖ್ಯಮಂತ್ರಿಗಳೇ ಇದೆಂಥಾ ಮಾಸ್ಕ್ ರೂಲ್ಸ್?

ರಾಜಧಾನಿಯಲ್ಲಿ ನಿಂತಿಲ್ಲ ಮಾರ್ಷಲ್‌ಗಳ ಮಾಸ್ಕ್‌ ದರ್ಪ!ಜನಸಾಮಾನ್ಯರನ್ನು ಬೇತಾಳನಂತೆ ಕಾಡ್ತಿದ್ದಾರೆ ಮಾರ್ಷಲ್‌ಗಳು, ಲಂಚ ಕೊಟ್ರೆ ಮಾಸ್ಕ್‌ ಹಾಕದಿದ್ರೂ ಮಾಫ್‌ ಆಗುತ್ತೆ ದಂಡ. ಅಧಿಕಾರಿಗಳನ್ನ, ಪ್ರಭಾವಿಗಳನ್ನು ಮುಟ್ಟಲ್ಲ ನಿಯಮ ಪಾಲಕರು.

ಇದು ನಮ್ಮ ರಾಜಧಾನಿ ಬೆಂಗಳೂರಲ್ಲಿ ಕೊರೋನಾ ನಿಯಮ ಪಾಲನೆಗೆ ನೇಮಕಗೊಂಡಿರುವ ಮಾರ್ಷಲ್‌ಗಳ ದರ್ಪ. ಇವರ ಟಾರ್ಗೆಟ್‌ ಬರೀ ಅಸಹಾಯಕ ಜನಸಾಮಾನ್ಯ ಮಾತ್ರ. ಮುಖದಲ್ಲಿ ಮಾಸ್ಕ್‌ ಇದ್ರೂ ಮೂಗಿನಿಂದ ಕೆಳಗೆ ಇದೆ ಅಂತ ಆರೋಪಿಸಿ 250 ರೂಪಾಯಿ ದಂಡ ಹಾಕ್ತಿದ್ದಾರೆ.

ಅದ್ರಲ್ಲೂ ಇವರ ದರ್ಪ ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್‌ ಬಸ್‌ ಸ್ಟ್ಯಾಂಡ್‌ನಲ್ಲಿ ವಿಪರೀತ ಹೆಚ್ಚಿದೆ.  ಆದ್ರೆ ಪಾಪ ಒಪ್ಪೊತ್ತಿನ ಊಟಕ್ಕೇ  ಕಷ್ಟ ಪಡೋ ಜನಸಾಮಾನ್ಯರು ಈ ಭಾರೀ ಮೊತ್ತದ ಮಾಸ್ಕ್‌ ದಂಡದಿಂದ ಕಂಗಾಲಾಗುತ್ತಿದ್ದಾರೆ. ದಂಡ ಕಟ್ಟಲಾಗದೆ ವಿಲವಿಲನೆ ಒದ್ದಾಡುತ್ತಿದ್ದಾರೆ. ದೂರದ ಊರುಗಳಿಂದ ಬರುವಂಥ ಜನರಿಗೆ ಮಾಸ್ಕ್‌ ನಿಯಮದ ಬಗ್ಗೆ ಜಾಗೃತಿ ಮೂಡಿಸದೆ, ಏಕಾಏಕಿ ದರೋಡೆಕೋರನ್ನು ಹಿಡಿಯುವಂತೆ ಹಿಡಿದು ಭಾವಚಿತ್ರ ತೆಗೆದು ನೀವು ದಂಡ ಕಟ್ಟಲೆಬೇಕು ಎಂದು  ಹೇಳುತ್ತಾರೆ. ಇಲ್ಲದಿದ್ದರೆ ನಿಮ್ಮನ್ನು ಪೋಲೀಸ್ ಠಾಣೆಗೆ ಕರೆದೊಯ್ಯುತ್ತೇವೆ ಎಂದು ಭಯಪಡಿಸಿ ದಂಡ ವಸೂಲಿ ಮಾಡುತಿದ್ದಾರೆ.  

ಸಾರ್ವಜನಿಕರನ್ನು ಅಡ್ಡ ಹಾಕಿ ದಂಡ ಕಟ್ಟಲು ಕರೆತಂದಾಗ ಸಾರ್ವಜನಿಕರು ತಪ್ಪಾಗಿದೆ ಕ್ಷಮಿಸಿ,ಕಾಲಿಗೆ ಬೇಕಾದ್ರೂ ಬೀಳ್ತೀವಿ,  ಊಟಕ್ಕೂ ದುಡ್ಡಿಲ್ಲ,  ಮರಳಿ ಊರಿಗೆ ಹೋಗುವಷ್ಟು ಮಾತ್ರ ಹಣವಿದೆ ಅಷ್ಟೆ ಅಂತ ಎಷ್ಟೇ  ಬೇಡಿಕೊಡ್ರೂ ಇವರ ಮನಕರಗಲ್ಲ.  ಇರುವಷ್ಟು ಹಣವನ್ನು ಕಿತ್ತುಕೊಂಡು ಕಳುಹಿಸುವ ದೃಶ್ಯವನ್ನು ಬಸ್‌ ನಿಲ್ದಾಣದಲ್ಲಿ ಸಾಮಾನ್ಯವಾಗಿ ಕಾಣಬಹುದು. ಈ ಮಾರ್ಷಲ್‌ಗಳಿಗೆ ಅಧಿಕಾರಿಗಳಿಂದ, ಸ್ವಲ್ಪ ಪ್ರಭಾವಿ ವ್ಯಕ್ತಿಗಳಿಂದ ದಂಡ ವಸೂಲಿ ಮಾಡಲು ಧಮ್‌ ಇಲ್ಲ. ರಾಜಕಾರಣಿಗಳ ಹತ್ರನೂ ಸುಳಿಯಲ್ಲ. ಅವರು ಮಾಸ್ಕ್‌ ಹಾಕದೆ ಲಕ್ಷಗಟ್ಟಲೆ ಜನರನ್ನು ಸೇರಿಸಿ ಯಾತ್ರೆ  ಜಾತ್ರೆ ಮಾಡುವಲ್ಲಿಗೆ ಮಾರ್ಷಲ್‌ಗಳು ಕಾಲೂ ಇಡಲ್ಲ.

ಇನ್ನು ಇದೇ ಬಸ್‌ಸ್ಟಾಂಡ್‌ನಲ್ಲಿ ನೋಡಿ ಬಸ್‌ನ ಟಿ.ಸಿಗಳು, ಕಂಡಕ್ಟರ್‌ಗಳು, ಡ್ರೈವರ್‌ಗಳು ಮಾಸ್ಕ್‌ ಇಲ್ಲದೇ ಇದ್ರೂ ಮಾರ್ಷಲ್‌ಗಳು ಏನೂ ಕೇಳಲ್ಲ. ದಂಡ ಹಾಕಲ್ಲ. ಅವರ ಕಡೆ ಕಣ್ಣೂ ಹಾಯಿಸಲ್ಲ. ಅಂದ್ರೆ ಇವರಿಂದ ಕೊರೋನಾ ಹರಡಲ್ವಾ? ಈ ತಾರತಮ್ಯ ಯಾಕೆ?

ಇನ್ನೊಂದು ಪ್ರಮುಖ ವಿಚಾರ ನಿಮಗೆ ಹೇಳಲೇ ಬೇಕು. ಈ ಬಸ್‌ ಸ್ಟಾಂಡ್‌ನಲ್ಲಿರುವ ಅಂಗಡಿಗಳು, ಹೋಟೆಲ್‌ನಲ್ಲಿರುವವರು ಯಾರೂ ಮಾಸ್ಕ್‌ ಹಾಕಲ್ಲ. ಈ ಮಾರ್ಷಲ್‌ಗಳು ಅವರಿಗೆ ಫೈನ್ ಹಾಕಲ್ಲ. ಯಾಕಂದ್ರೆ ತಿಂಗಳು ತಿಂಗಳು ಅವರಿಂದ ಲಂಚ ಪಡೀತಾರೆ  ಅನ್ನೋ ಆರೋಪವೂ ಕೇಳಿ ಬರ್ತಿದೆ. ಆದ್ರೆ ಈ ಮಾರ್ಷಲ್‌ಗಳು ಮಾತ್ರ ಹೋಟೇಲಲ್ಲಿ ತಿಂಡಿ ತಿಂದು ಮುಖ ತೊಳೆದು ಮುಖ ಒರೆಸುವಾಗ ಹಿಡಿದು ಫೈನ್‌ ಹಾಕಿ ನಾವು ಕೊರೋನಾ ನಿಯಮ ಪಾಲಕರು. ನಮ್ಮಿಂದಲೇ ಕೊರೋನಾ ಬೆಂಗಳೂರು ಬಿಟ್ಟು ಓಡಿ ಹೋಗಿದೆ ಅನ್ನೋ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಭಾರೀ ತೊಂದರೆ ಅನುಭವಿಸುತ್ತಿದ್ದಾರೆ.

ಕೊರೋನಾ ರಾಜಕಾರಣಿಗಳಿಗೆ ಇಲ್ಲ. ಹಬ್ಬ ಹರಿದಿನದ ಹೆಸರಲ್ಲಿ ಗುಂಪುಗೂಡಿ ಮೋಜು ಮಸ್ತಿ ಮಾಡುವವರಿಗೆ ಕೋರೋನಾ ಬರಲ್ಲ. ದೊಡ್ಡ ಶ್ರೀಮಂತರು, ಪ್ರಭಾವಿಗಳು ಓಡಾಡೋ ಜಾಗಗಳಲ್ಲಿ ವಿಮಾನ ನಿಲ್ದಾಣಗಳಲ್ಲಿ ಮಾರ್ಷಲ್‌ಗಳು ಇರಲ್ಲ. ಆದ್ರೆ ಕೊರೋನಾದ ಈ ಸಂಕಷ್ಟ ಕಾಲದಲ್ಲಿ 200 ರಿಂದ 250 ರೂಪಾಯಿ ದುಡಿಯವುದಕ್ಕೇ ಕಷ್ಟ ಪಡುತ್ತಿರೋ ಬಡಪಾಯಿಗಳ ಮೇಲೆ, ಬಡವರು, ಮಧ್ಯಮವರ್ಗದವರು ಓಡಾಡುವ ಬಸ್‌ ಸ್ಟ್ಯಾಂಡ್‌ಗಳಲ್ಲಿ ಈ ಮಾರ್ಷಲ್‌ ಗಳು ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿರುವುದು ಖಂಡನೀಯ.

Exit mobile version