ಮಾಯಾವತಿ-ಓವೈಸಿಗೆ ‘ಭಾರತರತ್ನ’ ಕೊಡಬೇಕು!

mayavathi

ಈ ಬಾರಿಯ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಐದು ರಾಜ್ಯಗಳ ಪೈಕಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಮರಳಿ ಅಧಿಕಾರ ಹಿಡಿದಿದೆ. ದೇಶದ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ, ಉತ್ತರಪ್ರದೇಶದಲ್ಲಿ ಯೋಗಿ ಮತ್ತೆ ಅಧಿಕಾರ ಹಿಡಿದಿದ್ದಾರೆ. ಬಿಜೆಪಿಯ ಗೆಲುವಿಗೆ ಭಾರೀ ಕೊಡುಗೆ ನೀಡಿದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ-ಸಂಸದ ಓವೈಸಿಗೆ ‘ಭಾರತರತ್ನ’ ನೀಡಬೇಕೆಂದು ಮಹಾರಾಷ್ಟ್ರದ ಶಿವಸೇನೆ ನಾಯಕ ಸಂಜಯ್ ರಾವತ್ ಲೇವಡಿ ಮಾಡಿದ್ದಾರೆ.

ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲ್ಲಲು ಪರೋಕ್ಷವಾಗಿ ಮಾಯಾವತಿ ಮತ್ತು ಓವೈಸಿ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಇಬ್ಬರೂ ನಾಯಕರಿಗೆ ಪದ್ಮವಿಭೂಷಣ ಮತ್ತು ಭಾರತರತ್ನ ನೀಡಿ ಗೌರವಿಸಬೇಕು. ಉತ್ತರಪ್ರದೇಶದಲ್ಲಿ ಬಿಜೆಪಿ ಗೆದ್ದಿರುವುದರಿಂದ ನಮಗೆ ಯಾವುದೇ ಆಘಾತವಾಗಿಲ್ಲ, ಬದಲಾಗಿ ಬಿಜೆಪಿಯ ಸಂತೋಷದಲ್ಲಿ ನಾವು ಭಾಗಿಯಾಗದ್ದೇವೆ ಎಂದಿದ್ದಾರೆ. ಇನ್ನು ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸಾಕಷ್ಟು ಹಿನ್ನಡೆಯನ್ನು ಅನುಭವಿಸಿದೆ. ಆದರೆ ಗೆಲುವು ಅದನ್ನು ಮರೆಮಾಚುತ್ತಿದೆ.

ಉತ್ತರಾಖಂಡನಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿಯೇ ಸೋತಿದ್ದಾರೆ. ಅದೇ ರೀತಿ ಗೋವಾದಲ್ಲಿ ಬಿಜೆಪಿಯ ಇಬ್ಬರು ಉಪಮುಖ್ಯಮಂತ್ರಿಗಳು ಸೋಲನ್ನು ಕಂಡಿದ್ದರೆ, ಇತ್ತ ಉತ್ತರಪ್ರದೇಶದಲ್ಲಿ 11 ಜನ ಹಾಲಿ ಸಚಿವರು ಸೋಲು ಕಂಡಿದ್ದಾರೆ. ಜೊತೆಗೆ ಕಳೆದ ಬಾರಿಗಿಂತ ಬಿಜೆಪಿ ಸುಮಾರು 57 ವಿಧಾನಸಭಾ ಸ್ಥಾನಗಳನ್ನು ಕಳೆದುಕೊಂಡಿದೆ. ಸಮಾಜವಾದಿ ಪಕ್ಷ 2017ರಲ್ಲಿ 42 ವಿಧಾನಸಭಾ ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ 125 ಅಂದರೆ ಮೂರು ಪಟ್ಟು ಹೆಚ್ಚಿನ ಸೀಟುಗಳನ್ನು ಗೆದ್ದಿದೆ.

ಉತ್ತರಪ್ರದೇಶದಲ್ಲಿ ಈಗ ಪ್ರತಿಪಕ್ಷವೂ ಬಲಿಷ್ಠವಾಗಿದೆ. ಇನ್ನೊಂದೆಡೆ ಪಂಜಾಬ್‍ನಲ್ಲಿ ಬಿಜೆಪಿಗೆ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಕಳೆದ ಅನೇಕ ವರ್ಷಗಳಿಂದ ಪಂಜಾಬ್‍ನಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ಕಸರತ್ತು ನಡೆಸುತ್ತಿದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಪಂಜಾಬ್‍ನಲ್ಲಿ ಭಾರೀ ಪ್ರಚಾರ ನಡೆಸಿದ್ದರು ಫಲ ನೀಡಿಲ್ಲ. ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದ್ದರು, ಮುಂದಿನ ಹಾದಿ ಸುಗಮವಾಗಿಲ್ಲ. ಮುಂಬರುವ ಲೋಕಸಭಾ ಚುನಾವಣೆ ಬಿಜೆಪಿಗೆ ಸವಾಲಾಗಲಿದೆ. ಆಮ್ ಆದ್ಮಿ ಪಕ್ಷದಂತೆ ಪ್ರಾದೇಶಿಕ ಶಕ್ತಿಗಳು ಬಿಜೆಪಿಯನ್ನು ಕಟ್ಟಿಹಾಕಲಿವೆ.

ಪಂಜಾಬ್‍ನಲ್ಲಾದಂತೆ ದೇಶಾದ್ಯಂತ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬರಲಿವೆ. ಬಿಜೆಪಿ ಸದ್ಯ 17 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೆ, 8 ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿವೆ. ಇನ್ನು ಕಾಂಗ್ರೆಸ್ ರಾಜಸ್ಥಾನ ಮತ್ತು ಛತ್ತೀಸ್‍ಘಡ್‍ನಲ್ಲಿ ಮಾತ್ರ ಅಧಿಕಾರದಲ್ಲಿದೆ. ಈ ಎಲ್ಲ ಅಂಶಗಳು ಮುಂಬರುವ ಚುನಾವಣೆಯೂ ಬಿಜೆಪಿಗೆ ಸುಲಭವಾಗಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದಿದ್ದಾರೆ.

Exit mobile version