ಮೇಘಾಲಯದಲ್ಲಿ ಕಾಂಗ್ರೆಸ್‌ಗೆ ಭಾರೀ ಆಘಾತ

ನವದೆಹಲಿ ನ 25 ಮೇಘಾಲಯದಲ್ಲಿ ಕಾಂಗ್ರೆಸ್ ಭಾರೀ ಹಿನ್ನಡೆಯಾಗಿದೆ. ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸೇರಿದಂತೆ 18 ಕಾಂಗ್ರೆಸ್ ಶಾಸಕರ ಪೈಕಿ 12 ಮಂದಿ ಶಾಸಕರು ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ. ಇದರೊಂದಿಗೆ ಮೇಘಾಲಯದಲ್ಲಿ ತೃಣಮೂಲ ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವಾಗಿದೆ. 

ಮೂಲಗಳ ಪ್ರಕಾರ, ಈ ಎಲ್ಲಾ ಶಾಸಕರು ಶಿಲ್ಲಾಂಗ್‌ನಲ್ಲಿ ಟಿಎಂಸಿ ಸೇರಿದರು. ವಿನ್ಸೆಂಟ್ ಎಚ್. ಪಾಲಾ ಅವರನ್ನು ಮೇಘಾಲಯ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಿದ ನಂತರ ಪಾಲಾ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮುಕುಲ್ ಎಂ ಸಂಗ್ಮಾ ನಡುವೆ ಎಲ್ಲವೂ ಸರಿಯಾಗಿಲ್ಲ ಎಂದು ತಿಳಿದುಬಂದಿದೆ. ಕಳೆದ ತಿಂಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಕುಲ್ ಸಂಗ್ಮಾ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ವಿನ್ಸೆಂಟ್ ಎಚ್ ಪಾಲಾರನ್ನು ಒಟ್ಟಿಗೆ ಭೇಟಿ ಮಾಡಿದ್ದರು.

 ಪಾಲಾ ಅವರ ನೇಮಕ ಕುರಿತಂತೆ ಪಕ್ಷದ ನಾಯಕತ್ವವು ಈ ನಿಟ್ಟಿನಲ್ಲಿ ತನ್ನನ್ನು ಸಂಪರ್ಕಿಸಿಲ್ಲ ಎಂದು ಸಂಗ್ಮಾ ಹೇಳಿದ್ದರು. ಅಂದಿನಿಂದ ಸಂಗ್ಮಾ ಅವರು ಟಿಎಂಸಿ ಸೇರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಇದೀಗ ಸಂಗ್ಮಾ ಸೇರಿದಂತೆ ಒಟ್ಟು 12 ಶಾಸಕರು ಪಕ್ಷ ಬದಲಿಸುವ ಮೂಲಕ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ನೀಡಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಂಗ್ಮಾ ಅವರು ಕಾಂಗ್ರೆಸ್‌ನ ಉನ್ನತ ನಾಯಕತ್ವದ ಬಗ್ಗೆ ಅತೃಪ್ತರಾಗಿದ್ದರು ಎಂದು ವರದಿಯಾಗಿದೆ.

Exit mobile version