ನೀವು ಅತಿಯಾಗಿ ಮೊಬೈಲ್ ಬಳಸುತ್ತೀರಾ? ; ಹಾಗಾದ್ರೆ ನಿಮಗೂ ಇರಬಹುದು `ನೊಮೋಫೋಬಿಯಾ’

smartphone

ಈ ಆಧುನಿಕ ಯುಗದಲ್ಲಿ ಯಾರ ಕೈಯಲ್ಲಿ ನೋಡಿದರೂ ಮೊಬೈಲ್(Mobile) ಇದ್ದೇ ಇರುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಮೊಬೈಲ್ ತನ್ನ ಮಾಯಾಜಾಲವನ್ನು ಬೀಸಿದೆ ಎಂದರೇ ತಪ್ಪಾಗಲ್ಲ. ಇತ್ತೀಚಿನ ದಿನಗಳಲ್ಲಂತೂ ಯುವಕರನ್ನು ಆಕರ್ಷಿಸುವ ಅಪ್ಲಿಕೇಶನ್‌ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹಾಗಾಗಿ ಮಕ್ಕಳೂ ಕೂಡ ತಮ್ಮ ವಯಸ್ಸಿನ ಫ್ರೆಂಡ್ಸ್ ಜೊತೆ ಹೊರಗಡೆ ಬಯಲಿನಲ್ಲಿ ಆಡವಾಡುವುದನ್ನು ಬಿಟ್ಟು, ಮೊಬೈಲ್ ಕೈಯಲ್ಲಿ ಹಿಡಿದು ಮೂಲೆ ಸೇರುತ್ತಿದ್ದಾರೆ.

ನಾಲ್ಕಾರು ಗೆಳೆಯರು ಒಂದೆಡೆ ಸೇರಿದ್ದರೂ ಸಹ ಪರಸ್ಪರ ಮಾತನಾಡದೇ ಮೊಬೈಲ್‌ನಲ್ಲೆ ಕಾಲ ಕಳೆಯುತ್ತಿದ್ದಾರೆ. ಇದರಿಂದಾಗಿ ಅವರು ಸ್ಮಾರ್ಟ್ ಫೋನ್ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ಹೇಗೆ ಬಿಡಿಸಬೇಕು ಎನ್ನುವುದೇ ಬಹುತೇಕ ಪೋಷಕರ ಚಿಂತೆಯಾಗಿದೆ. ಯುವಕರು ಅತಿಯಾದ ಮೊಬೈಲ್ ಹುಚ್ಚನ್ನು, ಮನೋವಿಜ್ಞಾನದಲ್ಲಿ ‘ನೊಮೋಫೋಬಿಯಾ’(Nomophobia) ಎಂದು ಗುರುತಿಸಲಾಗಿದೆ.
ಹೌದು, ಮೊಬೈಲ್ ಫೋನ್ ಬಿಟ್ಟಿರಲು ಸಾಧ್ಯವೇ ಇಲ್ಲ ಎನ್ನುವ ಭಯವೇ ನೊಮೋಫೋಬಿಯಾ.

ಸದಾ ಮೊಬೈಲ್ ಫೋನಿಗೆ ಅಂಟಿಕೊಂಡು, ಅದರಲ್ಲಿಯೇ ಕಾಲ ಕಳೆಯುವ ದುರಭ್ಯಾಸವೇ ನೊಮೋಫೋಬಿಯಾ. ಇಂತಹ ತೊಂದರೆಗೆ ಒಳಗಾದವರು ಫೋನ್‌ನ್ನು ಸದಾ ತಮ್ಮ ಬಳಿಯೇ ಇಟ್ಟುಕೊಂಡಿರುತ್ತಾರೆ. ಆಗಾಗ್ಗೆ ಮೊಬೈಲ್ ಸ್ಕ್ರೀನ್ ಓಪನ್ ಮಾಡುವುದು, ನೋಟಿಫಿಕೇಶನ್‌ಗಳನ್ನು ಗಮನಿಸುವತ್ತ ಚಿತ್ತ ಹರಿಸುತ್ತಾರೆ. ಪದೇ ಪದೇ ಸಾಮಾಜಿಕ ಜಾಲ ತಾಣಗಳಾದ ಫೇಸ್‌ಬುಕ್, ವಾಟ್ಸಪ್‌ಗಳನ್ನು ಓಪನ್ ಮಾಡುತ್ತಾ ಅದರಲ್ಲೆ ಕಾಲ ಕಳೆಯುತ್ತಾರೆ. ಒಟ್ಟಾರೆ ಇಂತವರು ಮೊಬೈಲ್ ಬಿಟ್ಟು ಒಂದು ಕ್ಷಣವೂ ಇರಲಾರೆ ಎನ್ನುವ ಸ್ಥಿತಿಗೆ ತಲುಪಿರುತ್ತಾರೆ.

ಇದಕ್ಕೆ ಕಾರಣವೂ ಇದೆ, ಇಂದಿನ ವಿಭಕ್ತ ಕುಟುಂಬ ಪದ್ದತಿಯು ನೊಮೋಫೋಬಿಯಾಕ್ಕೆ ಮೂಲಕಾರಣ ಎನ್ನಲಾಗುತ್ತದೆ. ತಂದೆ-ತಾಯಿ ಇಬ್ಬರೂ ದುಡಿಮೆಯ ನೆಪದಲ್ಲಿ ಮಕ್ಕಳಿಂದ ಹೆಚ್ಚು ಸಮಯ ದೂರವಿರುತ್ತಾರೆ. ಮಕ್ಕಳನ್ನು ಸುಮ್ಮನಿರಿಸಲು ಮೊಬೈಲ್ ಫೋನ್ ಕೊಡಿಸುತ್ತಾರೆ. ಆಕರ್ಷಕ ದೃಶ್ಯಿಕೆಗಳು, ಖುಷಿ ನೀಡುವ ವೀಡಿಯೋ ಗೇಮ್‌ಗಳು, ಕಣ್ಮನ ಸೆಳೆಯುವ ನೃತ್ಯಗಳು, ನಗಿಸುವ ಹಾಸ್ಯ ತುಣುಕುಗಳು ನೊಮೋಫೋಬಿಯಾಕ್ಕೆ ಕಾರಣಗಳು. ಅಲ್ಲದೇ ಕಡಿಮೆ ಬೆಲೆಗೆ ದೊರೆಯುವ ವೇಗದ ಇಂಟರ್‌ನೆಟ್ ಸೌಲಭ್ಯವೂ ಸಹ ಈ ದುರಭ್ಯಾಸಕ್ಕೆ ಕಾರಣವೆಂದರೆ ತಪ್ಪಾಗಲಾರದು.


ಮೊಬೈಲ್ ಫೋನ್‌ಗಳು ಯುಜನತೆಯ ಮೇಲೆ ಅನೇಕ ದುಷ್ಪರಿಣಾಮಗಳನ್ನುಂಟು ಮಾಡುತ್ತದೆ. ಇಂದಿನ ಮಕ್ಕಳು ಹಾಗೂ ಯುವಜನತೆ ಹೆಚ್ಚಿನ ರೇಡಿಯೋ ಫ್ರಿಕ್ವೆನ್ಸಿ ಪರಿಸರದಲ್ಲಿ ಬೆಳೆಯುತ್ತಿದ್ದಾರೆ. ಮೊಬೈಲ್‌ಗಳಿಂದ ಹೊರಸೂಸುವ ವಿಕಿರಣಗಳು ಅವರ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ದೇಹದ ಮೇಲೆ ಸೆಲ್‌ಫೋನ್ ವಿಕಿರಣ ಬೀರುವ ಪರಿಣಾಮದ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ‘ದಿ ಜರ್ನಲ್ ಆಫ್ ಅಮೇರಿಕನ್ ಮೆಡಿಕಲ್ ಅಸೋಸಿಯೇಶನ್’ ನಡೆಸಿದ ಅಧ್ಯಯನವು ಮಕ್ಕಳು ಹಾಗೂ ಯುವಕರ ಮೇಲೆ ಮೊಬೈಲ್ ಫೋನ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದೆ.


• ಮೊಬೈಲ್ ಬಳಸುತ್ತಿರುವ ಯುವಕರ ಮೆದುಳು ಮತ್ತು ಕಿವಿಯಲ್ಲಿ ಮಾರಣಾಂತಿಕ ಟ್ಯುಮರ್ ಬೆಳೆಯುವ ಸಾಧ್ಯತೆಯನ್ನು ಅಧ್ಯಯನವು ತೋರಿಸಿದೆ.
• ವಿಶ್ವ ಆರೋಗ್ಯ ಸಂಸ್ಥೆಯು ಸೆಲ್‌ಫೋನ್ ವಿಕಿರಣ ಭಾಗಶಃ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಹೇಳಿದೆ. ಮಕ್ಕಳು ಹಾಗೂ ಯುವಕರು ಶೇಕಡಾ 60 ರಷ್ಟು ವಿಕಿರಣವನ್ನು ಹೀರಿಕೊಳ್ಳುತ್ತಾರೆ. ಅವರ ಮೆದುಳಿನ ತೆಳುವಾದ ಚರ್ಮ, ಅಂಗಾಂಶಗಳು ಮತ್ತು ಮೂಳೆಗಳು ವಯಸ್ಕರಿಗಿಂತ ಎರಡು ಪಟ್ಟು ವಿಕಿರಣವನ್ನು ಹೀರಿಕೊಳ್ಳುತ್ತವೆ ಎಂದು ಅಧ್ಯಯನವು ಹೇಳುತ್ತದೆ. ಈ ವಿಕಿರಣಗಳು ನರಮಂಡಲವನ್ನು ದುರ್ಬಲಗೊಳಿಸಿ ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದು ಹೇಳಿದೆ.


ಇಂತಹ ದುಷ್ಪರಿಣಾಮವನ್ನುಂಟು ಮಾಡುವ ಮೊಬೈಲ್ ಬಳಕೆ ಮಿತಿಯಲ್ಲಿರಲಿ. ಮೊಬೈಲ್ ಜೀವನದ ಒಂದು ಭಾಗವೇ ಹೊರತು ಅದೇ ಜೀವನವಾಗಬಾರದು.

Exit mobile version