ಮುಂಬೈ, ಆ. 07: ಇಲ್ಲಿನ ಮೂರು ರೈಲ್ವೆ ನಿಲ್ದಾಣಗಳು ಮತ್ತು ಬಾಲಿವುಡ್ನ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ನಿವಾಸದಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಮಾಡಿದ್ದ ಇಬ್ಬರನ್ನು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ರಾತ್ರಿ 9.45ರ ಸುಮಾರಿಗೆ ಮುಂಬೈ ಪೊಲೀಸ್ನ ಮುಖ್ಯ ನಿಯಂತ್ರಣ ಕೊಠಡಿಗೆ ಅನಾಮಧೇಯ ಕರೆಯೊಂದು ಬಂದಿತ್ತು. ಕರೆ ಮಾಡಿದ್ದ ವ್ಯಕ್ತಿ, ‘ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ), ಬೈಕುಲ್ಲಾ, ದಾದರ್ ರೈಲ್ವೆ ನಿಲ್ದಾಣಗಳು ಮತ್ತು ಜುಹುದಲ್ಲಿನ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಬಂಗಲೆಯಲ್ಲಿ ಬಾಂಬ್ಗಳನ್ನು ಇರಿಸಲಾಗಿದೆ ಎಂದು ಹೇಳಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ರೈಲ್ವೆ ಪೊಲೀಸ್, ರೈಲ್ವೆ ರಕ್ಷಣಾ ಪಡೆ ಹಾಗೂ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದೊಳ ದೊಂದಿಗೆ ಮೂರು ರೈಲ್ವೆ ನಿಲ್ದಾಣಗಳು ಮತ್ತು ಅಮಿತಾಭ್ ನಿವಾಸದ ಜೊತೆಗೆ ಸುತ್ತಮುತ್ತಲಿನ ಸ್ಥಳಗಳಲ್ಲಿ ಶೋಧಕಾರ್ಯ ಕೈಗೊಂಡರು. ಆದರೆ, ಕಾರ್ಯಾಚರಣೆಯಲ್ಲಿ ಎಲ್ಲಿಯೂ ಅನುಮಾನಸ್ಪದ ವಸ್ತುಗಳು ಕಂಡು ಬರಲಿಲ್ಲ.
ನಂತರ, ಪೊಲೀಸರು ಕರೆ ಮಾಡಿದವರ ಮೊಬೈಲ್ ಸಂಖ್ಯೆಯನ್ನು ಟ್ರ್ಯಾಕ್ ಮಾಡಿದಾಗ, ಕರೆ ಮಾಡಿದ ವ್ಯಕ್ತಿ ಠಾಣೆ ಜಿಲ್ಲೆಯ ಮುಂಬ್ರಾ ಬಳಿಯ ಶಿಲ್ ಫಟಾ ಪ್ರದೇಶದಲ್ಲಿದ್ದಾನೆ ಎಂದು ಗೊತ್ತಾಯಿತು. ಕೊನೆಗೂ ಹುಸಿ ಕರೆ ಮಾಡಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.