ಕರ್ನಾಟಕದಲ್ಲಿ 900 ಕೋಟಿ ಹೂಡಿಕೆ ಮಾಡಿದ ಖ್ಯಾತ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್..!

Bengaluru: ವಿಶ್ವದ ಶ್ರೇಷ್ಠ ಸ್ಪಿನ್ ಬೌಲರ್ (Silk Bowler) ಎಂದೇ ಖ್ಯಾತಿ ಹೊಂದಿರುವ ಶ್ರೀಲಂಕಾ ತಂಡದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ (Muttiah Muralitharan) ಅವರು ಕರ್ನಾಟಕದಲ್ಲಿ ಸುಮಾರು 900 ಕೋಟಿ ಹೂಡಿಕೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಕ್ರಿಕೆಟ್ನಿಂದ (Cricket) ನಿವೃತ್ತಿನ ನಂತರ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಮುತ್ತಯ್ಯ ಮುರಳೀಧರನ್ ಅವರು ಶ್ರೀಲಂಕಾದಲ್ಲಿ (Sri Lanka) ಈಗಾಗಲೇ ಅನೇಕ ಉದ್ಯಮಗಳನ್ನು ಹೊಂದಿದ್ದಾರೆ. ಇದೀಗ ಅವರು ತಮ್ಮ ಉದ್ಯಮವನ್ನು ಭಾರತದಲ್ಲಿಯೂ ವಿಸ್ತರಣೆ ಮಾಡುವತ್ತ ಆಸಕ್ತಿ ಹೊಂದಿದ್ಧಾರೆ ಎನ್ನಲಾಗಿದೆ. ಈ ಹೂಡಿಕೆಗೆ ಈಗಾಗಲೇ ರಾಜ್ಯ ಸರಕಾರ ಅನುಮೋದನೆ ನೀಡಿದೆ. ಶ್ರೀಲಂಕಾದಲ್ಲಿ ತಂಪು ಪಾನೀಯ ಉತ್ಪಾದನಾ ಘಟಕವನ್ನು ಹೊಂದಿರುವ ಮುತ್ತಯ್ಯ ಮುರಳೀಧರನ್, ಧಾರವಾಡ ತಾಲೂಕಿನ ಮುಮ್ಮಿಗಟ್ಟಿಯಲ್ಲೂ ಉತ್ಪಾದನೆ ವಿಸ್ತರಿಸಲು ಯೋಜನೆ ರೂಪಿಸಿದ್ದಾರೆ. ಉದ್ಯಮ ಸ್ಥಾಪನೆಗೆ ಬೇಕಾಗುವ ಜಮೀನು ಪರಿಶೀಲಿಸಲು ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿ ಗ್ರಾಮಕ್ಕೂ ಅವರು ಭೇಟಿ ನೀಡಿದ್ದರು.

ಮೊದಲ ಹಂತದಲ್ಲಿ 250 ಕೋಟಿ ರೂಪಾಯಿ ಹೂಡಿಕೆ ಮಾಡಲು ಯೋಜನೆ ರೂಪಿಸಲಾಗಿದ್ದು, ಫಾಸ್ಟ್ ಮೂವಿಂಗ್ ಕಂನ್ಸೂಮರ್ ಗೂಡ್ಸ್ ಕ್ಲಸ್ಟರ್ ಅಡಿಯಲ್ಲಿ ಹೂಡಿಕೆ ಮಾಡಲು ಮುರಳೀಧರನ್ ನಿರ್ಧರಿಸಿದ್ದಾರೆ. ಸಿಲೋನ್ ಬೆವರೇಜಸ್ ಕ್ಯಾನ್ ಪ್ರೈವೆಟ್ ಲಿಮಿಟೆಡ್ (Ceylon Beverages Can Private Limited) ಹೆಸರಿನ ತಂಪು ಪಾನೀಯ ಉತ್ಪಾದನಾ ಘಟಕ ಒಟ್ಟು 3 ಹಂತಗಳಲ್ಲಿ ತನ್ನ ಉದ್ಯಮವನ್ನ ಭಾರತದಲ್ಲಿ ವಿಸ್ತರಿಸಲು ಯೋಜಿಸಿದೆ ಎಂದು ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ ತಿಳಿಸಿದೆ.

ಇನ್ನು ಸರಕಾರದ ಹಂತದಲ್ಲಿ ಫಾಸ್ಟ್ ಮೂವಿಂಗ್ ಕಂನ್ಸೂಮರ್ ಗೂಡ್ಸ್ (Fast Moving Consumer Goods) ಉದ್ಯಮ ಆರಂಭಕ್ಕೆ ಅನುಮೋದನೆ ದೊರೆತಿದೆ. ಮುಂಬರುವ 2-3 ತಿಂಗಳಲ್ಲಿ ಕಾಮಗಾರಿ ಆರಂಭಿಸುವ ಸಾಧ್ಯತೆ ಇದೆ. ಮೂರು ಹಂತದಲ್ಲಿ ಒಟ್ಟು 900 ಕೋಟಿ ರೂಪಾಯಿ ಬಂಡವಾಳ ಹೂಡುವ ಸಾಧ್ಯತೆ ಇದೆ. ಇನ್ನೊಂದೆಡೆ ದೇಶದ ಅತಿ ದೊಡ್ಡ ಕಾರ್ಪೊರೇಟ್ (Corporate) ಕಂಪನಿಯ ಮಾರ್ಕೆಟಿಂಗ್ ಸಹಭಾಗಿತ್ವದಲ್ಲಿ ಮುರಳೀಧರನ್ ಈ ಘಟಕ ಆರಂಭಿಸುತ್ತಿದ್ದಾರೆ ಎನ್ನಲಾಗಿದೆ.

Exit mobile version