ಪಂಚರಾಜ್ಯಗಳ ಚುನಾವಣೆಗೆ ಮೈಸೂರಿನ ಅಳಿಸಲಾಗದ ಶಾಯಿ ಬಳಕೆ

ಮೈಸೂರು, ಮಾ. 11: ಪಂಚರಾಜ್ಯಗಳ ಚುನಾವಣಾ ಕಾವು ಏರಿರುವ ಬೆನ್ನಲ್ಲೇ ಮೈಸೂರಿನಿಂದ ತಯಾರಾಗುವ ಅಳಿಸಲಾಗದ ಶಾಯಿ ಪೂರೈಕೆಗೆ ಆಯಾ ರಾಜ್ಯಗಳ ಚುನಾವಣಾ ಆಯೋಗಗಳು ಪ್ರಸ್ತಾವನೆ ಸಲ್ಲಿಸಿವೆ.

ಆಯೋಗಗಳ ಮನವಿಯಂತೆ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ (ಮೈಲ್ಯಾಕ್) ಈಗಾಗಲೇ ಭರದ ತಯಾರಿಯಲ್ಲಿ ತೊಡಗಿದ್ದು, ಎರಡು ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ಶಾಯಿಯನ್ನು ಪೂರೈಸಲು ಸಮರೋಪಾದಿ ಕೆಲಸ ನಿರ್ವಹಿಸುತ್ತಿದೆ.

ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ಬಳಸಲ್ಪಡುವ ಅಳಿಸಲಾಗದ ಶಾಯಿ ಒದಗಿಸುವಂತೆ ಆಯಾ ರಾಜ್ಯಗಳ ಚುನಾವಣಾ ಆಯೋಗ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆಗೆ ಪತ್ರ ಬರೆದಿದ್ದು, ಐದೂ ರಾಜ್ಯಗಳಿಂದ ಒಟ್ಟು 6,99,270 ಬಾಟಲಿ ಇಂಕಿಗೆ ಬೇಡಿಕೆ ಬಂದಿದೆ.

ಬೇಡಿಕೆ ಬಂದ ದಿನದಿಂದಲೇ ಉತ್ಪನ್ನದ ತಯಾರಿಕೆಯಲ್ಲಿ ಹೆಚ್ಚಳ ಮಾಡಿರುವ ಮೈಲ್ಯಾಕ್, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಚುನಾವಣಾ ಆಯೋಗಗಳು ಕೇಳಿದ್ದ ನಿಗಧಿತ ಪ್ರಮಾಣದ ಇಂಕನ್ನು ಈಗಾಗಲೇ ಕಳುಹಿಸಿಕೊಟ್ಟಿದೆ.

ಈ ತಿಂಗಳ 15ರೊಳಗೆ ಎಲ್ಲ ರಾಜ್ಯಗಳ ಬೇಡಿಕೆಗಳನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಮೈಲ್ಯಾಕ್ ಕರ‍್ಯೋನ್ಮುಖವಾಗಿದ್ದು, ಇನ್ನುಳಿದ ಮೂರು ರಾಜ್ಯಗಳಿಗೆ ಮುಂದಿನ ವಾರದೊಳಗೆ ತಲುಪಿಸಲು ಸಿದ್ಧತೆ ಮಾಡಿಕೊಂಡಿದೆ.

ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಶಾಯಿಗೆ ಬೇಡಿಕೆ ಹೆಚ್ಚಾಗಿದ್ದು, ಐದೂ ರಾಜ್ಯಗಳಿಂದ ಮೈಲ್ಯಾಕ್‌ಗೆ ಒಟ್ಟು 11 ಕೋಟಿ 20 ಲಕ್ಷ ರೂ.ಗಳ ವ್ಯವಹಾರ ನಡೆದಿದೆ. ಮೈಲ್ಯಾಕ್‌ನಲ್ಲಿ 5ಸಿಸಿ ಮತ್ತು 10ಸಿಸಿ ಬಾಟಲಿಗಳಲ್ಲಿ ಶಾಯಿ ಲಭ್ಯವಿದ್ದು, ಈ ಐದೂ ರಾಜ್ಯಗಳ ಚುನಾವಣಾ ಆಯೋಗಗಳು 10ಸಿಸಿ ಪ್ರಮಾಣದ ಬಾಟಲಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದವು. ಅಂತೆಯೇ ಮೈಲ್ಯಾಕ್ ಎಲ್ಲ ರಾಜ್ಯಗಳಿಗೂ 10ಸಿಸಿ ಬಾಟಲಿಯಲ್ಲಿ ಅಳಿಸಲಾಗದ ಶಾಯಿಯನ್ನು ಪೂರೈಕೆ ಮಾಡುತ್ತಿದೆ.

ಉತ್ತರಪ್ರದೇಶ ಪ್ರಸ್ತಾವನೆ:
ಉತ್ತರಪ್ರದೇಶ ರಾಜ್ಯದಲ್ಲಿ ಸಧ್ಯದಲ್ಲೇ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಶಾಯಿ ಒದಗಿಸುವಂತೆ ಕೋರಿ ಉತ್ತರ ಪ್ರದೇಶ ಚುನಾವಣಾ ಆಯೋಗ ಪ್ರಸ್ತಾವನೆ ಸಲ್ಲಿಸಿದ್ದು, ಆ ರಾಜ್ಯದ ಬೇಡಿಕೆ ಈಡೇರಿಕೆಗಾಗಿ ಮೈಲ್ಯಾಕ್‌ನಲ್ಲಿ ತಯಾರಿ ನಡೆದಿದೆ.

ವಿವಿಧ ರಾಜ್ಯಗಳ ಬೇಡಿಕೆ ಪ್ರಮಾಣ (10ಸಿಸಿ ಬಾಟಲಿಗಳಲ್ಲಿ)

ಅಸ್ಸಾಂ 83,860

ಪಶ್ಚಿಮ ಬಂಗಾಳ 2,70,700

ಕೇರಳ 1,02,000

ತಮಿಳುನಾಡು 2,37,410

ಪುದುಚೆರಿ 6,000

ಒಟ್ಟು 6,99,270 ಬಾಟಲಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷ ಎನ್.ವಿ.ಫಣೀಶ್, ಚುನಾವಣಾ ಆಯೋಗಗಳು ಎಷ್ಟೇ ಪ್ರಮಾಣದ ಶಾಯಿ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಿದರೂ, ಅದನ್ನು ನಿಗಧಿತ ಸಮಯದೊಳಗೆ ಒದಗಿಸಲು ಮೈಲ್ಯಾಕ್ ಶಕ್ತವಾಗಿದೆ. ಪಂಚರಾಜ್ಯಗಳ ಚುನಾವಣೆಗೆ ಈಗಾಗಲೇ ಭರದ ತಯಾರಿ ನಡೆದಿದೆ. ಶಾಯಿಯ ಗುಣಮಟ್ಟದಲ್ಲಿ ಅತ್ಯುನ್ನತೆ ಕಾಯ್ದುಕೊಂಡಿರುವುದರಿಂದ ಇಂದು ಭಾರತ ಮಾತ್ರವಲ್ಲದೆ, ಹೊರದೇಶಗಳಿಂದಲೂ ಶಾಯಿಗಾಗಿ ಬೇಡಿಕೆ ಬರುತ್ತಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಮಾತ್ರವಲ್ಲ, ಮತ್ತಷ್ಟು ಹೊಸ ಆವಿಷ್ಕಾರಕ್ಕೆ ಮೈಲ್ಯಾಕ್ ಪ್ರಯತ್ನ ನಡೆಸಿದ್ದು, ಅದರ ಫಲಿತಾಂಶ ಸಧ್ಯದಲ್ಲೇ ಬರಲಿದೆ ಎಂದು ತಿಳಿಸಿದರು.

Exit mobile version