BSP ಪಕ್ಷದಿಂದ ಉಚ್ಚಾಟನೆ ಮಾಡದಿದ್ದರೆ ಅದೇ ಪಕ್ಷದಲ್ಲಿ ಇರುತ್ತಿದ್ದೆ : ಎನ್. ಮಹೇಶ್!

N Mahesh

ಮಾಯಾವತಿ(Mayavathi) ಅವರು ನನ್ನನ್ನು ಬಿಎಸ್‍ಪಿ(BSP) ಪಕ್ಷದಿಂದ ಉಚ್ಚಾಟನೆ ಮಾಡದಿದ್ದರೆ ನಾನು ಬಿಎಸ್‍ಪಿ ಪಕ್ಷದಲ್ಲಿಯೇ ಮುಂದುವರೆಯುತ್ತಿದ್ದೆ. ಆದರೆ ಒಂದೇ ಒಂದು ಸೂಚನೆಯನ್ನು ಕೊಡದೆ ನನ್ನನ್ನು ಕಟ್ ಮಾಡಿ ಬಿಸಾಡಿದ್ರು. ಹೀಗಾಗಿ ನಾನು ಬಿಜೆಪಿ(BJP) ಸೇರಿಕೊಂಡೆ ಎಂದು ಕೊಳ್ಳೆಗಾಲ(Kollegal) ಶಾಸಕ ಎನ್. ಮಹೇಶ್(MLA N.Mahesh) ಹೇಳಿದ್ದಾರೆ.

ಹಾಸನದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಷರತ್ತುಗಳನ್ನು ಹಾಕಿ ಅಥವಾ ಆಮಿಷಗಳಿಗೆ ಒಳಗಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ. ನಾನು ಎಂದಿಗೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷ ನನಗೆ ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ. ಅವಕಾಶ ಕೊಟ್ಟರೆ ಬಿಜೆಪಿ ಪಕ್ಷದ ಪರವಾಗಿ ದೊಡ್ಡಮಟ್ಟದಲ್ಲಿ ಸಂಘಟನೆ ಮಾಡುತ್ತೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ನನಗೆ ಟಿಕೆಟ್ ಕೊಟ್ಟರೆ ಕೊಳ್ಳೆಗಾಲ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಟಿಕೆಟ್ ಕೊಡದಿದ್ದರೆ, ಪಕ್ಷ ಟಿಕೆಟ್ ನೀಡಿದ ಅಭ್ಯರ್ಥಿಯ ಪರ ಪ್ರಚಾರಕಾರ್ಯ ಮಾಡುತ್ತೇನೆ ಎಂದರು.

ಇನ್ನು 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‍ಪಿ ಪಕ್ಷದಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಬಂದ ಎನ್. ಮಹೇಶ್ ಅವರು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡುವ ಮೂಲಕ ಮಂತ್ರಿ ಸ್ಥಾನವನ್ನು ಪಡೆದುಕೊಂಡಿದ್ದರು. ತದನಂತರ ಮೈತ್ರಿ ಸರ್ಕಾರಕ್ಕೆ ಕೆಲ ವಿಷಯಗಳಲ್ಲಿ ಬೆಂಬಲ ನೀಡುವ ಬಗೆಗೆ ಎನ್. ಮಹೇಶ್ ಸ್ವಂತ ನಿಲುವನ್ನು ತೆಗೆದುಕೊಂಡಿದ್ದು ಮಾಯಾವತಿ ಅವರನ್ನು ಕೆರಳಿಸಿತ್ತು. ಹೀಗಾಗಿ ಎನ್. ಮಹೇಶ್ ಅವರನ್ನು ಬಿಎಸ್‍ಪಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಬಿಎಸ್‍ಪಿಯಿಂದ ಉಚ್ಚಾಟನೆಯಾದ ಎನ್. ಮಹೇಶ್ ನಂತರ ಬಿಜೆಪಿ ಸೇರ್ಪಡೆಯಾದರು.

ಸದ್ಯ ಬಿಜೆಪಿಯಿಂದ ಮಂತ್ರಿಯಾಗುವ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ತಿಂಗಳು ನಡೆಯುವ ಸಂಪುಟ ವಿಸ್ತರಣೆಯಲ್ಲಿ ದಲಿತ ಸಮುದಾಯದ ಎನ್. ಮಹೇಶ್ ಅವರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ.

Exit mobile version