ಹಳೆಮೈಸೂರು ಭಾಗದಲ್ಲಿ ಬಿಜೆಪಿಗೆ ಶಕ್ತಿಯಾಗ್ತಾರಾ ದಲಿತ ನಾಯಕ ಎನ್. ಮಹೇಶ್?

BJP

ಮುಂಬರುವ ವಿಧಾನಸಭಾ ಚುನಾವಣೆ(Vidhansabha Election) ದೃಷ್ಟಿಯಿಂದ ರಾಜ್ಯದಲ್ಲಿ ಮೂರು ಪಕ್ಷಗಳು ಭರ್ಜರಿ ರಣತಂತ್ರ ಹೆಣೆಯುತ್ತಿವೆ.

ಜಾತಿವಾರು ಲೆಕ್ಕಾಚಾರ ಶುರುವಾಗಿದ್ದು, ದಲಿತ ಮತಬ್ಯಾಂಕ್ ಸೆಳೆಯಲು ಬಿಜೆಪಿ-ಕಾಂಗ್ರೆಸ್(BJP-Congress) ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಆದರೆ ಹಳೆ ಮೈಸೂರು ಭಾಗದಲ್ಲಿ ಪ್ರಬಲ ನಾಯಕತ್ವದ ಕೊರತೆಯನ್ನು ಬಿಜೆಪಿ ಎದುರಿಸುತ್ತಿದೆ. ಹೀಗಾಗಿ ಆಪರೇಷನ್ ಕಮಲದ ಮೂಲಕ ಮತ್ತಷ್ಟು ಹೊಸ ನಾಯಕರಿಗೆ ಗಾಳ ಹಾಕಲು ಬಿಜೆಪಿ ನಿರ್ಧರಿಸಿದೆ. ಇನ್ನೊಂದೆಡೆ ಹಳೆ ಮೈಸೂರು ಭಾಗದಲ್ಲಿ ಪ್ರಭಾವಿ ದಲಿತ ನಾಯಕನಾಗಿ ಗುರುತಿಸಿಕೊಂಡಿರುವ ಎನ್. ಮಹೇಶ್ ಅವರನ್ನು ಬಳಸಿಕೊಳ್ಳಲು ಚಿಂತಿಸಲಾಗಿದೆ.

ಇನ್ನು ಎನ್. ಮಹೇಶ್ ಈಗಾಗಲೇ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದೀಗ ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ರಣತಂತ್ರ ಹೆಣೆಯಲಾಗಿದೆ. ಈ ಹಿಂದೆ ಹಳೆ ಮೈಸೂರು ಭಾಗದಲ್ಲಿ ಶ್ರೀನಿವಾಸ್‍ಪ್ರಸಾದ್ ಪ್ರಬಲ ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದರು. ಅನಾರೋಗ್ಯದ ಕಾರಣ ಶ್ರೀನಿವಾಸ್‍ಪ್ರಸಾದ್ ಚುನಾವಣಾ ರಾಜಕೀಯದಲ್ಲಿ ಸಕ್ರಿಯರಾಗಿಲ್ಲ. ಹೀಗಾಗಿ ಅವರ ಸ್ಥಾನಕ್ಕೆ ಎನ್. ಮಹೇಶ್ ಅವರನ್ನು ನೇಮಿಸಲು ರಾಜ್ಯ ಬಿಜೆಪಿ ಮುಂದಾಗಿದೆ. ಸಂಪುಟ ವಿಸ್ತರಣೆಯಲ್ಲಿ ಎನ್. ಮಹೇಶ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ.

ಇನ್ನು ಎನ್. ಮಹೇಶ್ ಅವರು 2018ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್‍ಪಿ ಪಕ್ಷದಿಂದ ಗೆದ್ದು ಶಾಸಕರಾಗಿದ್ದರು. ನಂತರ ಮಾಯಾವತಿ ಅವರು ಎನ್. ಮಹೇಶ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದರು. ಎನ್. ಮಹೇಶ್ ಅವರು ಕಳೆದ ಅನೇಕ ದಶಕಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ನಾಲ್ಕು ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದರು, ಹಳೆ ಮೈಸೂರು ಭಾಗದಲ್ಲಿ ಪ್ರಬಲ ದಲಿತ ನಾಯಕನಾಗಿ ತಮ್ಮದೇ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ರಾಜ್ಯ ರಾಜಕೀಯದಲ್ಲಿ ಪ್ರಬಲ ದಲತ ನಾಯಕನಾಗಿ ಎನ್. ಮಹೇಶ್ ಗುರುತಿಸಿಕೊಂಡಿದ್ದಾರೆ.

ಈ ಹಿಂದೆ ಎನ್. ಮಹೇಶ್ ಬಿಜೆಪಿ ಸೇರ್ಪಡೆಯಾದಾಗ ಅವರ ಅಭಿಮಾನಿಗಳ ಒಂದು ವರ್ಗ ಅದನ್ನು ವಿರೋಧಿಸಿತ್ತು, ಆದರೆ ಇನ್ನೊಂದು ವರ್ಗ ಅವರ ಬೆಂಬಲಕ್ಕೆ ನಿಂತಿದೆ. ಹೀಗಾಗಿ ಎನ್. ಮಹೇಶ್ ಅವರು ಹಳೆ ಮೈಸೂರು ಭಾಗದ ಪ್ರತಿ ಜಿಲ್ಲೆಗೂ ಭೇಟಿ ನೀಡಿ ತಮ್ಮ ಅಭಿಮಾನಿಗಳನ್ನು ಬಿಜೆಪಿಗೆ ಸೇರ್ಪಡೆ ಮಾಡುತ್ತಿದ್ದಾರೆ. ಎನ್. ಮಹೇಶ್ ದಲಿತ ಸಮುದಾಯದ ಸಂಘಟನೆಗಾಗಿ ಸಕ್ರಿಯರಾದಷ್ಟು ಬಿಜೆಪಿಗೆ ವರದಾನವಾಗಲಿದೆ.

Exit mobile version