8ನೇ ಬಾರಿಗೆ ಸಿಎಂ ಆಗಿ ನಿತೀಶ್ ಕುಮಾರ್ ; `ಜನಾದೇಶಕ್ಕೆ ದ್ರೋಹʼ : ಬಿಜೆಪಿ

ಪಾಟ್ನಾ : ಎನ್ಡಿಎ(NDA) ಮೈತ್ರಿಕೂಟದಿಂದ ಹೊರನಡೆದ ನಂತರ, ನಿತೀಶ್ ಕುಮಾರ್(Nithish Kumar) ಇಂದು ಬಿಹಾರದ(Bihar) ಎಂಟನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಿತೀಶ್ ಕುಮಾರ್ ಅವರು ಮಂಗಳವಾರ ರಾಜ್ಯಪಾಲ ಫಾಗು ಚೌಹಾಣ್ ಅವರಿಗೆ ರಾಜೀನಾಮೆ(Resign) ಸಲ್ಲಿಸಿದ್ದರು ಮತ್ತು 164 ಶಾಸಕರ ಪಟ್ಟಿಯನ್ನು ಸಲ್ಲಿಸಿ, ಬಿಹಾರದಲ್ಲಿ ಹೊಸ ಸರ್ಕಾರ ರಚಿಸಲು ಏಳು ಪಕ್ಷಗಳ ಬೆಂಬಲವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ನಿತೀಶ್ ಕುಮಾರ್ ಇಂದು ಎಂಟನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇನ್ನು ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗಿನ ಮೈತ್ರಿಯನ್ನು ತೊರೆದು ಆರ್ಜೆಡಿಯೊಂದಿಗೆ ಸೇರಿ ಸರ್ಕಾರ ರಚಿಸುವ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ ಬಿಜೆಪಿ ಕೂಡಾ ಜೆಡಿಯುನ(JDU) ಕೆಲ ಬಂಡಾಯ ಶಾಸಕರ ಬೆಂಬಲ ಪಡೆದು ಸರ್ಕಾರ ರಚಿಸುವ ತಂತ್ರ ರೂಪಿಸಿದೆ. ಅದರ ಭಾಗವಾಗಿ ನಮ್ಮ ಅನೇಕ ಶಾಸಕರನ್ನು ಬಿಜೆಪಿ ಸಂಪರ್ಕಿಸಿದೆ ಎಂದು ಜೆಡಿಯು ಆರೋಪಿಸಿದೆ. ಆದರೆ ಬಿಜೆಪಿ ಈ ಆರೋಪವನ್ನು ತಳ್ಳಿಹಾಕಿದ್ದು, ನಾವು ಯಾರನ್ನು ಸಂಪರ್ಕಿಸಿಲ್ಲ ಎಂದಿದೆ.

ಆದರೆ ಜೆಡಿಯು ಮೂಲಗಳ ಪ್ರಕಾರ, ಪಕ್ಷದ ಬಂಡಾಯಗಾರ ಆರ್ಸಿಪಿ ಸಿಂಗ್ ಅವರು ಬಿಜೆಪಿಯ(BJP) ಆಜ್ಞೆಯ ಮೇರೆಗೆ ಜೆಡಿಯು ಶಾಸಕರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಇನ್ನು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ), ಏಕರೂಪ ನಾಗರಿಕ ಸಂಹಿತೆ, ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದು, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದು, ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆ, ಪೆಗಾಸಸ್ ಸ್ಪೈವೇರ್ ಹಗರಣ ಮತ್ತು ಬಿಹಾರದ ಜನಗಣತಿ ವಿಚಾರಗಳು ಜೆಡಿ(ಯು) ಮತ್ತು ಬಿಜೆಪಿ ನಡುವೆ ತಿಕ್ಕಾಟಕ್ಕೆ ಕಾರಣವಾಗಿದ್ದವು.

ಇತ್ತೀಚೆಗೆ ಪ್ರಾದೇಶಿಕ ಪಕ್ಷಗಳಿಗೆ ಮಂಕಾದ ಭವಿಷ್ಯವಿದೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ(JP Nadda) ಅವರು ನೀಡಿದ್ದ ಹೇಳಿಕೆಯು ಜೆಡಿಯು ಕೋಪವನ್ನು ಹೆಚ್ಚಿಸಿತ್ತು ಎನ್ನಲಾಗಿದೆ. ಇನ್ನು ನಿತೀಶ್ ಕುಮಾರ್ ಅವರ ಈ ನಡೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಅವರು ಜನರ ಆದೇಶಕ್ಕೆ ದ್ರೋಹ ಬಗೆದಿದ್ದಾರೆ. ನಾವು ಎನ್ಡಿಎ ಅಡಿಯಲ್ಲಿ 2020ರ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡಿದ್ದೇವೆ, ಜನಾದೇಶವು ಜೆಡಿಯು ಮತ್ತು ಬಿಜೆಪಿ ಪರವಾಗಿತ್ತು. ಮೈತ್ರಿ ತೊರೆದಿರುವುದು ನಿತೀಶ್ ಕುಮಾರ್ ಅವರು ಬಿಹಾರದ ಜನರಿಗೆ ಮಾಡಿದ ದ್ರೋಹವಾಗಿದೆ ಎಂದು ಬಿಜೆಪಿ ಟೀಕಿಸಿದೆ.

Exit mobile version