ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸುವ ನಿರ್ಧಾರ ಸದ್ಯಕ್ಕಿಲ್ಲ: ಸಚಿವ ಸುರೇಶ್‌ ಕುಮಾರ್‌

ಬೆಂಗಳೂರು, ಮೇ. 24: ಕೋವಿಡ್-‌19 ಸದ್ಯದ ಪರಿಸ್ಥಿತಿಯಲ್ಲಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಸಾಧ್ಯವಾಗದಿದ್ದರೂ, ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದು ಪಡಿಸುವ ಚಿಂತನೆ ಶಿಕ್ಷಣ ಇಲಾಖೆ ಮುಂದಿಲ್ಲ ಎಂದು ಸಚಿವ ಎಸ್.ಸುರೇಶ್‌ ಕುಮಾರ್‌ ಹೇಳಿದರು.

ದೆಹಲಿಯಲ್ಲಿ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಆಯೋಜಿಸಿದ್ದ ಶಿಕ್ಷಣ ಸಚಿವರೊಂದಿಗೆ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದು ಕಷ್ಟ. ಈಗ ಪರೀಕ್ಷೆ ನಡೆಸಿದರೆ ಕೊರೊನಾ ಮತ್ತಷ್ಟು ಹೆಚ್ಚಾಗುತ್ತದೆ. ಉಪ ಚುನಾವಣೆ ವೇಳೆ ಕರ್ತವ್ಯದಲ್ಲಿದ್ದ ಹಲವು ಶಿಕ್ಷಕರು ಮೃತಪಟ್ಟಿದ್ದಾರೆ. ಇನ್ನೂ ಹಲವು ಶಿಕ್ಷಕರು ಕೊರೊನಾದಿಂದ ಬಳಲುತ್ತಿದ್ದಾರೆ. ಇದರ ನಡುವೆ ರಾಜ್ಯಕ್ಕೆ 3ನೇ ಅಲೆ ಆತಂಕ ಎದುರಾಗಿದೆ.

ಆದರೂ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಬೇಕು. ಆಗಸ್ಟ್ ವೇಳೆಗೆ ಸೋಂಕಿನ ಪ್ರಮಾಣ ತಗ್ಗುವ ಸಾಧ್ಯತೆಯಿದೆ. ಕೊರೊನಾ ಕಡಿಮೆಯಾದ ಬಳಿಕ ಪರೀಕ್ಷೆ ನಡೆಸಲು ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.

ಪರೀಕ್ಷೆ ನಡೆಯುವುದೋ, ಇಲ್ಲವೋ ಎನ್ನುವ ಗೊಂದಲ ಇದೆ. ರಾಜ್ಯದಲ್ಲಿ ಸದ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು 8,90,೦೦೦ಕ್ಕೂ ಹೆಚ್ಚು ಹಾಗೂ ದ್ವಿತೀಯು ಪಿಯುಸಿಗೆ 6,86,663 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.

Exit mobile version