ಕೊರೋನಾ ಕರ್ತವ್ಯದ ನಡುವೆ ಮೃತಪಟ್ಟ ಆರೋಗ್ಯ ಕಾರ್ಯಕರ್ತರಿಗೆ ಇನ್ಸುರೆನ್ಸ್ ಸೌಲಭ್ಯವಿಲ್ಲ: ಕೇಂದ್ರ ಸರ್ಕಾರ

ನವದೆಹಲಿ, ಏ. 19: ಕೊರೋನಾ ಸಂದರ್ಭದಲ್ಲಿ ಕರ್ತವ್ಯನಿರತ ವೈದ್ಯಕೀಯ ಸಿಬ್ಬಂದಿ ಮೃತಪಟ್ಟರೆ, ಕೇಂದ್ರ ಸರ್ಕಾರದ ವತಿಯಿಂದ 50 ಲಕ್ಷ ರೂಪಾಯಿಗಳ ಪರಿಹಾರ ನೀಡುವ ಯೋಜನೆ ಇತ್ತು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್​​ನ ಈ ವಿಮಾ ಯೋಜನೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ರಾಜ್ಯಗಳಿಗೆ ಈ ಸಂಬಂಧ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ಮಾರ್ಚ್ 24ರಿಂದ ಕೋವಿಡ್ ಕರ್ತವ್ಯನಿರತ ಯಾವುದೇ ಆರೋಗ್ಯ ಕಾರ್ಯಕರ್ತರು ಸಾವನ್ನಪ್ಪಿದರೆ, ಅವರ ಕುಟುಂಬಗಳಿಗೆ ಈ ವಿಮೆಯ ಸೌಲಭ್ಯ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೋವಿಡ್ 19 ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುವ ಆರೋಗ್ಯ ಸಿಬ್ಬಂದಿಗೆ ಏನಾದರೂ ಆಗಿ ಜೀವ ಹೋದರೆ, ಅವರ ಕುಟುಂಬಗಳು ಅನಾಥವಾಗದಂತೆ ತಡೆಯಲು ಈ ವಿಮಾ ಯೋಜನೆ ಜಾರಿಗೆ ತರಲಾಗಿತ್ತು. ಇದುವರಗೆ ದೇಶದಲ್ಲಿ ಕೇವಲ 287 ಜನ ಈ ವಿಮೆಯಿಂದ ಪರಿಹಾರ ಪಡೆದಿದ್ದಾರೆ.

ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದ ಈ ವಿಮಾ ಸೌಲಭ್ಯ ನಿಲ್ಲಿಸುವುದರ ಹಿಂದಿನ ಕಾರಣ ಏನು ಎನ್ನುವುದನ್ನು ಕೇಂದ್ರ ಸರ್ಕಾರ ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ ಮಾರ್ಚ್ 24, 2021ರೊಳಗೆ ಮೃತಪಟ್ಟ ಯಾವುದೇ ಆರೋಗ್ಯ ಕಾರ್ಯಕರ್ತರ ಕುಟುಂಬಗಳು ವಿಮಾ ಹಣ ಪಡೆಯಲು ಅರ್ಹರಿದ್ದು ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ಅವರಿಗೆ ಒಂದು ತಿಂಗಳು ಹೆಚ್ಚುವರಿ ಕಾಲಾವಕಾಶವನ್ನೂ ನೀಡಲಾಗುವುದು ಎಂದು ರಾಜೇಶ್ ಭೂಷಣ್ ತಿಳಿಸಿದ್ದಾರೆ.

ಮಾರ್ಚ್ 30, 2020ರಂದು ಈ ವಿಮೆ ಜಾರಿಗೆ ಬಂದಿದ್ದು ಆರಂಭದಲ್ಲಿ ಕೇವಲ 90 ದಿನಗಳವರಗೆ ಮಾತ್ರ ಯೋಜನೆ ಜಾರಿಯಲ್ಲಿತ್ತು. ನಂತರ 2021ರ ಮಾರ್ಚ್ 24ರವರಗೆ ಇದನ್ನು ವಿಸ್ತರಿಸಲಾಗಿತ್ತು.

Exit mobile version