ಮುಸ್ಲಿಂ ಸಂಸದನ ವಿರುದ್ದ ಅಸಂಸದೀಯ ಪದ ಬಳಕೆ ; ಸಂಸದ ರಮೇಶ್ ಬಿಧುರಿಗೆ ಶೋಕಾಸ್ ನೋಟಿಸ್

New Delhi: ಲೋಕಸಭೆಯಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಸಂಸದ ಕುನ್ವರ್ ಡ್ಯಾನಿಶ್ ಅಲಿ (Kunwar Danish Ali) ವಿರುದ್ಧ ಅಸಂಸದೀಯ ಪದಗಳನ್ನು ಬಳಸಿದ್ದಕ್ಕಾಗಿ ಬಿಜೆಪಿ ಸಂಸದ ರಮೇಶ್ ಬಿಧುರಿ (Ramesh Bidhuri) ಅವರಿಗೆ ಭಾರತೀಯ ಜನತಾ ಪಕ್ಷ ಶೋಕಾಸ್ ನೋಟಿಸ್ ನೀಡಿದೆ.

ಲೋಕಸಭೆಯಲ್ಲಿ ಚಂದ್ರಯಾನ-3 (Chandrayaan-3) ಮಿಷನ್ ಕುರಿತ ಚರ್ಚೆಯ ವೇಳೆ ದಕ್ಷಿಣ ದೆಹಲಿ ರಮೇಶ್ ಬಿಧುರಿ ಅವರು ಬಿಎಸ್ಪಿ (BSP) ನಾಯಕ ಕುನ್ವರ್ ಡ್ಯಾನಿಶ್ ಅಲಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದು, ಅವರ ಹೇಳಿಕೆ ಇದೀಗ ಭಾರೀ ವಿವಾದ ಸೃಷ್ಟಿಸಿದೆ. ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಸಂಸದ ಡ್ಯಾನಿಶ್ ಅಲಿ ಅವರು ಸಂಸದ ರಮೇಶ್ ಬಿಧುರಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ತಮ್ಮ ಲೋಕಸಭಾ ಸದಸ್ಯತ್ವವನ್ನು ತ್ಯಜಿಸುವುದಾಗಿ ಹೇಳಿದ್ಧಾರೆ.

ನನ್ನಂತಹ ಚುನಾಯಿತ ಸದಸ್ಯನ ಸ್ಥಿತಿ ಹೀಗಿರುವಾಗ ಸಾಮಾನ್ಯರ ಸ್ಥಿತಿ ಏನಾಗಬಹುದು. ಲೋಕಸಭಾ ಸ್ಪೀಕರ್ (Speaker) ಅವರು ಈ ಬಗ್ಗೆ ವಿಚಾರಣೆ ನಡೆಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನನಗೆ ನ್ಯಾಯ ಸಿಗುತ್ತದೆ ಎಂದು ನಾನು ನಂಬಿದ್ದೇನೆ. ನಾನು ಭಾರವಾದ ಹೃದಯದಿಂದ ಈ ಸಂಸತ್ತನ್ನು ತೊರೆಯುತ್ತಿದ್ದೇನೆ ಎಂದು ಬಿಎಸ್ಪಿ ನಾಯಕ ಹೇಳಿದ್ದಾರೆ.

ರಮೇಶ್ ಬಿಧುರಿ ಅವರ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ರಮೇಶ್ ಬಿಧುರಿ ಅವರು ಬಳಸುವ ಭಾಷೆಯನ್ನು ಸಂಸತ್ತಿನ ಒಳಗೆ ಅಥವಾ ಹೊರಗೆ ಬಳಸಬಾರದು. ಅವರನ್ನು ಸಂಸತ್ತಿನಿಂದ ಅಮಾನತುಗೊಳಿಸುವಂತೆ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ (Om Birla) ಅವರು ಸದನದಲ್ಲಿ ಸಂಸದ ರಮೇಶ್ ಬಿಧುರಿ ಮಾಡಿದ ಆಕ್ಷೇಪಾರ್ಹ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಭವಿಷ್ಯದಲ್ಲಿ ಅಂತಹ ನಡವಳಿಕೆಯನ್ನು ಪುನರಾವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಇನ್ನು ಬಿಜೆಪಿ ಸಂಸದ ರಮೇಶ್ ಬಿಧುರಿ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ವಿಪಕ್ಷಗಳು ಬಿಜೆಪಿ (BJP) ವಿರುದ್ದ ತೀವ್ರ ವಾಗ್ದಾಳಿ ನಡೆಸಿವೆ. ಒರ್ವ ಅಲ್ಪಸಂಖ್ಯಾತ ಸಂಸದನ ಬಗ್ಗೆ ಬಿಜೆಪಿ ಸಂಸದ ನೀಡಿರುವ ಹೇಳಿಕೆಗಳು ಅವರ ಪಕ್ಷದ ಮನಸ್ಥಿತಿಯ ಸಂಕೇತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.

Exit mobile version