ಮತ್ತೆ ದಾಖಲೆಯ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ

ನವದೆಹಲಿ ಅ 16 ದೇಶದಲ್ಲಿ ಮತ್ತೆ ತೈಲೋತ್ಪನ್ನಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸಿದೆ. ಶನಿವಾರವೂ ಕೂಡ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ 35 ಪೈಸೆಯಷ್ಟು ಏರಿಕೆ ಕಂಡಿದೆ. ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ದೇಶದ ಜನಸಾಮಾನ್ಯರು ನಿರಂತರವಾಗಿ ಏರಿಕೆಯಾಗುತ್ತಿರುವ ಇಂಧನ ದರದಿಂದ ತತ್ತರಿಸಿ ಹೋಗಿದ್ದಾರೆ.  

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು ಶನಿವಾರ ದೇಶದಾದ್ಯಂತ ಇಂಧನ ದರವನ್ನು ಮತ್ತೆ ಹೆಚ್ಚಳ ಮಾಡಿದ್ದು, ಈ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೊಸ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 35 ಪೈಸೆ ಏರಿಕೆಯಾಗಿದ್ದು, 105.49 ರೂ.ಗೆ ತಲುಪಿದೆ. ಅದೇ ರೀತಿ ಪ್ರತಿ ಲೀಟರ್ ಡೀಸೆಲ್ ದರವು 35 ಪೈಸೆ ಏರಿಕೆಯಾಗಿದ್ದು, 94.22 ರೂ. ತಲುಪಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 36 ಪೈಸೆ ಏರಿಕೆಯಾಗಿದ್ದು, 109.16 ರೂ.ಗೆ ತಲುಪಿದೆ. ಅದೇ ರೀತಿ ಪ್ರತಿ ಲೀಟರ್ ಡೀಸೆಲ್ ದರವು 37 ಪೈಸೆ ಏರಿಕೆಯಾಗಿ, ಶತಕ(100) ಭಾರಿಸಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 111.43ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 102.15 ರೂ.ಗೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 106.10ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರವು 97.33 ರೂ.ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 102.80ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 98.69 ರೂ.ಗೆ ಏರಿಕೆಯಾಗಿದೆ.

ತೈಲ ಕಂಪನಿಗಳು ಅಳವಡಿಸಿಕೊಂಡ ಬೆಲೆ ಸೂತ್ರದ ಪ್ರಕಾರ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಅಂತಾರಾಷ್ಟ್ರೀಯ ಬೆಲೆ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಇಂಧನ ಬೆಲೆಯನ್ನು ಪ್ರತಿದಿನ ಪರಿಷ್ಕರಿಸುತ್ತವೆ. ಪ್ರಸ್ತುತ ದೇಶದ 4 ಮೆಟ್ರೋ ನಗರಗಳಲ್ಲಿ ಇಂಧನ ದರ ಅತ್ಯಧಿಕವಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಬದಲಾಗುತ್ತವೆ. ಸಂಜೆ 6 ರಿಂದ ಹೊಸ ಶುಲ್ಕಗಳು ಅನ್ವಯವಾಗುತ್ತವೆ. ಅಬಕಾರಿ ತೆರಿಗೆ, ಡೀಲರ್ ಕಮಿಷನ್ ಮತ್ತು ಹೀಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸೇರಿಸಿದ ನಂತರ, ಅದರ ಬೆಲೆ ಬಹುತೇಕ ದ್ವಿಗುಣಗೊಳ್ಳುತ್ತದೆ. ವಿದೇಶಿ ವಿನಿಮಯ ದರಗಳೊಂದಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆ ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನ ಬದಲಾಗುತ್ತವೆ.

Exit mobile version