ನಾವು ಪ್ರತಿದಿನ ಬಳಸುವ ಪ್ಲಾಸ್ಟಿಕ್ ಬಾಟಲಿ ಮಣ್ಣಿನಲ್ಲಿ ಕೊಳೆಯಲು 450-1000 ವರ್ಷಗಳನ್ನು ತೆಗೆದುಕೊಳ್ಳುತ್ತದೆ!

ಪ್ಲಾಸ್ಟಿಕ್(Plastic) ಪರಿಸರಕ್ಕೆ(Environment) ಮಾರಕ ಎಂದು ತಿಳಿದಿದ್ದರೂ, ಅದನ್ನು ಬಳಸದೇ ಇರಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಾವು ಪ್ಲಾಸ್ಟಿಕ್ ಮೇಲೆ ಅವಲಂಬಿತರಾಗಿದ್ದೇವೆ. ಅದರಲ್ಲೂ, ಹೆಚ್ಚುತ್ತಿರುವ ಆರೋಗ್ಯ ಕಾಳಜಿ ಮತ್ತು ಶುದ್ಧ ಕುಡಿಯುವ ನೀರಿನ ಕೊರತೆಯು ಭಾರತದಲ್ಲಿ ಬಾಟಲಿ ನೀರಿನ ಮಾರುಕಟ್ಟೆಯ ಬೆಳವಣಿಗೆಗೆ ಕಾರಣವಾಗಿದೆ. ಪರಿಮಳಯುಕ್ತ ಬಾಟಲಿ ನೀರಿನ ಬಳಕೆಯು ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.


ಹೆಚ್ಚಿನ ಸಂದರ್ಭಗಳಲ್ಲಿ, ನ್ಯಾಚುರಲ್ ಮಿನರಲ್ ವಾಟರ್ ಅನ್ನು ಬೋರಿಂದ ಪಡೆಯಲಾಗುತ್ತದೆ. ಮಿನರಲ್ ವಾಟರ್(Mineral Water) ಕೋಲಿಫಾರ್ಮ್(Coliform Bacteria) ಗಳಂತಹ ವಿವಿಧ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ. ವಿಶೇಷವಾಗಿ ನೀರನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿಸಿದಾಗ ಹೆಚ್ಚು ಸಮಯದವರೆಗೆ ಈ ಬ್ಯಾಕ್ಟೀರಿಯಾಗಳು ಬದುಕಬಲ್ಲವು. ಇತ್ತೀಚಿನ ವರ್ಷಗಳಲ್ಲಿ, ಬಾಟಲ್ ನೀರಿಂದ ಕ್ಯಾಂಪೈಲೋಬ್ಯಾಕ್ಟರ್ ಸೋಂಕಿನ ಅಪಾಯ ಕೂಡ ಹೆಚ್ಚಾಗುತ್ತಿದೆ.

ಇನ್ನು, ಪ್ಲಾಸ್ಟಿಕ್ ಬಾಟಲಿಯಲ್ಲಿ ಬೆಚ್ಚಗಿನ ನೀರನ್ನು ಹಾಕಿದಾಗ, ನೀರು ಮತ್ತು ಪ್ಲಾಸ್ಟಿಕ್ ನಡುವಿನ ರಿಯಾಕ್ಷನಿಂದಾಗಿ ಕ್ಯಾನ್ಸರ್(Cancer) ಕಾರಕ ಕಾಂಪೌಂಡ್ಗಳು ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಬೆಚ್ಚಗಿನ ನೀರನ್ನು ಪ್ಲಾಸ್ಟಿಕ್ ಬಾಟಲಿಗಳ ಬದಲು ಗಾಜಿನ ಬಾಟಲಿಗಳಲ್ಲಿ ಸಂಗ್ರಹಿಸುವುದು ಒಳ್ಳೆಯದು. ಇನ್ನು, ನಮಗೆ ಆಶ್ರಯ ನೀಡಿರುವ ಭೂತಾಯಿಯನ್ನು ಸಂರಕ್ಷಿಸಬೇಕಾದ ನಾವು, ಅದೆಷ್ಟು ಅಜಾಗರೂಕರಾಗಿದ್ದೇವೆ ಎಂದರೆ,

ಮಾರುಕಟ್ಟೆಯಿಂದ ತಂದ ಪ್ಲಾಸ್ಟಿಕ್ ತ್ಯಾಜ್ಯವನ್ನು(Plastic Waste) ಎಲ್ಲೆಂದರಲ್ಲಿ ಬಿಸಾಡುತ್ತೇವೆ. ನಾವು ಬಿಸಾಡುವ ತ್ಯಾಜ್ಯ ಭೂಮಿಯಲ್ಲಿ ಕರಗದೇ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಮನುಷ್ಯರ ಸೇರಿ ಪರಿಸರ, ಪ್ರಾಣಿ, ಪಕ್ಷಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಸೆಣಬಿನ ಕೈಚೀಲವನ್ನು ಬಳಸಿದರೆ ನಮಗೂ ಒಳಿತು, ಪರಿಸರಕ್ಕೂ ಒಳ್ಳೆಯದು. ಪರಿಸರಕ್ಕೆ ಮಾರಕವಾಗಿರುವ ಈ ಪ್ಲಾಸ್ಟಿಕ್ ಭೂಮಿ ಹಾಗೂ ಸಮುದ್ರವನ್ನು ಕಲುಷಿತಗೊಳಿಸುತ್ತಿದೆ.

ಒಂದು ತೆಳುವಾದ ಪ್ಲಾಸ್ಟಿಕ್ ಹಾಳೆ, ಭೂಮಿಯಲ್ಲಿ ಕೊಳೆಯಲು ನೂರಾರು ವರ್ಷ ಬೇಕಾಗುತ್ತದೆ. ಭೂಮಿಯ ಮೇಲಿನ ನೀರು ಅಂತರ್ಜಲ(Ground Water) ಸೇರಲು ಪ್ಲಾಸ್ಟಿಕ್‌ ಅಡ್ಡಿಯಾಗುತ್ತಿದ್ದು, ಅಂತರ್ಜಲದ ಮಟ್ಟ ಕೂಡ ಕುಸಿಯುತ್ತಿದೆ. ಸಮುದ್ರ ಸೇರುವ ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರದಲ್ಲಿ ಒಂದು ತ್ಯಾಜ್ಯ ದ್ವೀಪವನ್ನೇ ಸೃಷ್ಟಿಸುತ್ತಿದೆ. ಪ್ಲಾಸ್ಟಿಕ್ ಅನ್ನು ಮರುಬಳಕೆ(Re-Use/Recycle) ಮಾಡಲು ಸಾಧ್ಯವಿಲ್ಲದಿರೋದ್ರಿಂದ, ಇದು ಪರಿಸರಕ್ಕೆ ದೊಡ್ಡ ಮಟ್ಟದ ಹಾನಿಯನ್ನುಂಟು ಮಾಡುತ್ತದೆ.

ನಾವು ಪ್ರತಿದಿನ ಬಳಸುವ ಪ್ಲಾಸ್ಟಿಕ್ ಬಾಟಲಿ ಕೊಳೆಯಲು 450 ರಿಂದ 1000 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈ ಮೂಲಕ ಪ್ಲಾಸ್ಟಿಕ್ ನೀರಿನ ಬಾಟಲಿ ಭೂಮಿಯ ಮೇಲೆ ಕಸವಾಗಿಯೇ ಉಳಿಯುತ್ತದೆ. ಈ ಸಂದರ್ಭದಲ್ಲಿ, ಪರಿಸರವನ್ನು ನಾವು ಸಂರಕ್ಷಣೆ ಮಾಡಿದರೆ ಮಾತ್ರ ನಮ್ಮನ್ನು ಪರಿಸರ ಸಂರಕ್ಷಣೆ ಮಾಡುತ್ತದೆ ಎಂಬುದನ್ನು ನಾವು ಪದೇ ಪದೇ ನೆನಪು ಮಾಡಿಕೊಳ್ಳಬೇಕಾಗುತ್ತದೆ.

Exit mobile version