ಪ್ಲಾಸ್ಟಿಕ್ ಜಗತ್ತು ; ಮಾನವನ ರಕ್ತದಲ್ಲೂ ಪತ್ತೆಯಾಯ್ತು ಪ್ಲಾಸ್ಟಿಕ್!

plastic

ಪ್ಲಾಸ್ಟಿಕ್(Plastic) ಇಲ್ಲದ ಸ್ಥಳವೇ ಇಲ್ಲ, ಹೆಚ್ಚು ಕಡಿಮೆ ಸರ್ವಾಂತರ್ಯಾಮಿ ಆಗ್ಬಿಟ್ಟಿದೆ ಈ ಪ್ಲಾಸ್ಟಿಕ್ ಅನ್ನೋ ಮಾಯಾವಿ. ಪ್ಲಾಸ್ಟಿಕ್ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಸಹ ಅದರ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವೇ ಆಗದಷ್ಟರ ಮಟ್ಟಿಗೆ ನಾವು ಪ್ಲಾಸ್ಟಿಕ್ ಅನ್ನು ನೆಚ್ಚಿಕೊಂಡು ಬಿಟ್ಟಿದ್ದೇವೆ! ಆದರೆ, ಅದರ ದುಷ್ಪರಿಣಾಮ ಮಾತ್ರ “ಅಣು ಬಾಂಬ್” ಗಿಂತಲೂ ಅಧಿಕವಾಗಿದೆ.

ಇಂದು ನಾವು ಬಳಸುವ ಪ್ಲಾಸ್ಟಿಕ್ ಮುಂದಿನ ನೂರಾರು ವರ್ಷಗಳಿಗೆ ಪರಿಣಾಮವನ್ನು ತಂದಿಡಬಲ್ಲದು. ಸದ್ಯ ಭಾರತವನ್ನು “2022ರ ವೇಳೆಗೆ ಪ್ಲಾಸ್ಟಿಕ್‌ ಮುಕ್ತ ಭಾರತ” ಮಾಡಬೇಕೆನ್ನುವ ಪ್ರಧಾನಿಯವರ ಕನಸು ಸಾಕಾರಗೊಳ್ಳಬೇಕಾದರೆ ಈ ಭೂಮಂಡಲದ ನಿವಾಸಿಗಳಾದ ನಮ್ಮ ಮೇಲೆ ಮಹತ್ತರ ಜವಾಬ್ದಾರಿಯಿದೆ. ನಮ್ಮ ಅಜಾಗರೂಕತೆಯಿಂದಾಗಿ ಪ್ಲಾಸ್ಟಿಕ್ ವಸ್ತುಗಳು ಪ್ರಾಣಿಗಳ ಹೊಟ್ಟೆ ಸೇರಿದ್ದರ ಬಗ್ಗೆ ಈ ಹಿಂದೆ ಮಾಹಿತಿ ಪಡೆದಿರುವ ನಾವುಗಳು ಇದೀಗ ಮಾನವ ದೇಹದಲ್ಲೂ ಕೂಡಾ ಪ್ಲಾಸ್ಟಿಕ್ ಇರುವ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿದೆ.


ಎಲ್ಲೆಡೆ ತನ್ನ ಕಬಂಧ ಬಾಹುಗಳನ್ನ ಚಾಚಿರೋ ಪ್ಲಾಸ್ಟಿಕ್, ಈವರೆಗೆ ಸಮುದ್ರ ಆಹಾರಗಳಲ್ಲಿ ಪತ್ತೆಯಾಗಿತ್ತು, ಅಲ್ಲದೆ ಮನುಷ್ಯನ ಮೆದುಳು ಹಾಗೂ ಗರ್ಭದಲ್ಲಿದ್ದ ಶಿಶುವಿನ ಮಾಸುವಿನಲ್ಲೂ ಕಂಡುಬಂದಿತ್ತು. ಆದ್ರೆ ಮೊದಲ ಬಾರಿ ಮನುಷ್ಯನ ರಕ್ತದಲ್ಲೂ ಮೈಕ್ರೋ ಪ್ಲಾಸ್ಟಿಕ್
ದೊರೆತಿರುವುದು ಆತಂಕ ಸೃಷ್ಟಿಸಿದೆ. Environmental international ಎಂಬ ಪತ್ರಿಕೆಯಲ್ಲಿ, ಅಧ್ಯಯನದ ಆಧಾರದ ಮೇಲೆ ಇದರ ಬಗ್ಗೆ ವರದಿ ಪ್ರಕಟವಾಗಿದೆ.

ಈ ವರದಿಯ ಪ್ರಕಾರ, 22 ಆರೋಗ್ಯವಂತ ಸ್ವಯಂಸೇವಕರಿಂದ ಸಂಗ್ರಹಿಸಲಾದ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಿದಾಗ, ಸುಮಾರು 80% ಸ್ಯಾಂಪಲ್ ಗಳಲ್ಲಿ ಮೈಕ್ರೋ ಪ್ಲಾಸ್ಟಿಕ್ ಪತ್ತೆಯಾಗಿದೆ! 50 ಪ್ರತಿಶತ ಬ್ಲಡ್ ಸ್ಯಾಂಪಲ್ ನಲ್ಲಿ ಪತ್ತೆಯಾದ ಪ್ಲಾಸ್ಟಿಕ್, ವಾಟರ್ ಬಾಟಲ್ ಗಳನ್ನು ತಯಾರಿಸೋಕೆ ಬಳಸುವಂತಹ ಪ್ಲಾಸ್ಟಿಕ್ ಆಗಿದೆ. ಇನ್ನು 30 ಪ್ರತಿಶತ ರಕ್ತದ ಮಾದರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ Polyethylene terephthalate (PET) ಪ್ಲಾಸ್ಟಿಕ್ ಪತ್ತೆಯಾಗಿದೆ.

ಇದನ್ನು ಸಾಮಾನ್ಯವಾಗಿ ಕುಡಿಯುವ ನೀರಿನ ಬಾಟಲ್, ಊಟದ ಪ್ಲೇಟ್, ಊಟ ಪಾರ್ಸಲ್ ಮಾಡುವ ಡಬ್ಬಿಗಳು, ಬಟ್ಟೆಗಳನ್ನು ಪ್ಯಾಕ್ ಮಾಡುವ ಕವರ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹಾಗೇ ಆಹಾರ ಸಂಗ್ರಹಿಸೋಕೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ನಲ್ಲಿರೋ ಪಾಲಿಸ್ಟೈರೀನ್ ಪ್ಲಾಸ್ಟಿಕ್ ಅಂಶವೂ ಪತ್ತೆಯಾಗಿದೆ. ಇನ್ನು ಮುಂದಾದರೂ ನಾವು ಎಚ್ಚೆತ್ತು, ಇದು ನಮಗೆಲ್ಲ ಒಂದು ಎಚ್ಚರಿಕೆಯ ಗಂಟೆ ಅಂತ ಭಾವಿಸಿ,
ಪ್ಲಾಸ್ಟಿಕ್ ವಸ್ತುಗಳ ಮೇಲಿನ ಅವಲಂಬನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿದ್ರೆ ನಮ್ಮ ಮುಂದಿನ ಪೀಳಿಗೆಯಾದ್ರು ಅರೋಗ್ಯವಾಗಿರುತ್ತದೆ.

Exit mobile version