ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಅರ್ಜಿ ಸಲ್ಲಿಸಲು ತೃತೀಯ ಲಿಂಗಿಗಳಿಗೂ ಅವಕಾಶ

ಬೆಂಗಳೂರು ಡಿ 22 : ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ ಕೆಎಸ್‌ಆರ್‌ಪಿ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗೆ ಅರ್ಜಿ ಆಹ್ವಾನಿನಿದ್ದು ವಿಶೇಷ ಎಂದರೆ ಈ ಬಾರಿ ಅರ್ಜಿ ಆಹ್ವಾನಿಸಲು ತೃತೀಯ ಲಿಂಗಿಗಳಿಗೂ ಅವಕಾಶ ನೀಡಲಾಗಿದೆ ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್ ಸೂದ್‌ ತಿಳಿಸಿದ್ದಾರೆ. ಇತ್ತೀಚೆಗೆ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಶೇ.1ರಷ್ಟು ಮೀಸಲಾತಿ ನೀಡುವಂತೆ ಮಂಗಳಮುಖಿಯರ ಸಮುದಾಯ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯ ತೃತೀಯ ಲಿಂಗಿಗಳ ಬೇಡಿಕೆಗೆ ಅಸ್ತು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಮಂಗಳಮುಖಿಯರಿಗಾಗಿ ರಾಜ್ಯ ಪೊಲೀಸ್​ ಇಲಾಖೆ 5 ಹುದ್ದೆಗಳನ್ನು ಮೀಸಲಿರಿಸಿದೆ. ಪೊಲೀಸ್ ಇಲಾಖೆಯ ವಿಶೇಷ ಮೀಸಲು ಪಡೆ (ಕೆಎಸ್​ಆರ್​​ಪಿ ಮತ್ತು ಐ.ಆರ್.ಬಿ) ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅವರು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗೆ ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿಯಿಂದ ಮಂಗಳಮುಖಿ ಎಂಬ ಧೃಡೀಕರಣ ಪತ್ರ ಕಡ್ಡಾಯವಾಗಿದೆ. ಧೃಡೀಕರಣ ಪತ್ರ ನೀಡಿಲ್ಲವಾದಲ್ಲಿ ಅಂತಹ ಅರ್ಜಿ ತಿರಸ್ಕೃತವಾಗಲಿದೆ.

ಇಲಾಖೆಯ ನಿರ್ಧಾರವನ್ನು ಮಂಗಳಮುಖಿಯರು ಸ್ವಾಗತಿಸಿದ್ದಾರೆ. ಸರ್ಕಾರದ ಇತರ ಸಂಸ್ಥೆಗಳು ಇಂತಹ‌ ನಡೆಯನ್ನು ಅನುಸರಿಸುವಂತೆ ಮನವಿ ಮಾಡಿದ್ದಾರೆ. “ಪೊಲೀಸ್ ಇಲಾಖೆ ನಿರ್ಧಾರ ಸ್ವಾಗತಾರ್ಹ.‌ ನಮಗೆ ಈ ಹಿಂದೆ ಯಾವ ರೀತಿಯಾದ ಸೌಕರ್ಯಗಳು‌ ಸಿಗುತ್ತಿರಲಿಲ್ಲ. ಈಗ ಒಂದೊಂದೇ ಸೌಕರ್ಯಗಳು ಸಿಗುತ್ತಿದ್ದು‌ ನಾವು‌ ಕೂಡ ಸಮಾಜದಲ್ಲಿ ಎಲ್ಲರಂತೆ ಬಾಳಲು ಅವಕಾಶ ಸಿಕ್ಕಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅರ್ಜಿಗಳನ್ನು ಡಿಸೆಂಬರ್ ೨೦, ೨೦೨೧ ರಿಂದ ಜನವರಿ ೧೮, ೨೦೨೨ರವರೆಗೆ ಸಲ್ಲಿಸಬಹುದು. ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತದೆ.

ಇಲಾಖೆ ನಿಗಧಿಪಡಿಸುವ ಅರ್ಜಿ ಶುಲ್ಕವನ್ನು ಮಾತ್ರ ಪಾವತಿಸಬೇಕಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ www.recruitment.ksp.gov.in ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

Exit mobile version