ನನ್ನ ಮೇಲೆ ‘ಗೂಂಡಾ ಆಕ್ಟ್’ ಹಾಕಿದ್ದು ಕಾಂಗ್ರೆಸ್ ಅಲ್ಲ, ಬಿಜೆಪಿಯವ್ರು : ಪ್ರಮೋದ್ ಮುತಾಲಿಕ್!

pramod

ನನಗೆ ಕಳೆದ ಆರು ವರ್ಷಗಳಿಂದ ಗೋವಾ(Goa) ರಾಜ್ಯಕ್ಕೆ ಹೋಗದಂತೆ ಬ್ಯಾನ್ ಮಾಡಲಾಗಿದೆ. ನೀಚ, ನಿರ್ಲಜ್ಜ ಬಿಜೆಪಿಯವ್ರು ಸಂಸ್ಕೃತಿ ಅಂತೆಲ್ಲಾ ಮಾತಾಡ್ತಾರೆ. ಆದರೆ ಇಂದು ಗೋವಾದಲ್ಲಿ ನೈಜಿರಿಯಾ, ಅಮೇರಿಕಾ ಸೇರಿದಂತೆ ಜಗತ್ತಿನ ಎಲ್ಲಾ ದೇಶಗಳ ಜನರಿದ್ದಾರೆ. ಆದರೆ ಪಕ್ಕದ ರಾಜ್ಯದ ಪ್ರಮೋದ್ ಮುತಾಲಿಕ್‍ಗೆ(Pramod Muthalik) ಪ್ರವೇಶವಿಲ್ಲ.

ಇದು ಬಿಜೆಪಿ(BJP) ಹೇಳುವ ಸಂವಿಧಾನ, ಸಮಾನತೆ. ನಾನು ಕ್ಯಾಸಿನೋ, ಪಬ್‍ಗಳ ಮೇಲೆ ದಾಳಿ ಮಾಡುತ್ತೇನೆಂದು ನನಗೆ ಕಳೆದ ಆರು ವರ್ಷಗಳಿಂದ ನಿರ್ಬಂಧ ಹೇರಿದ್ದಾರೆ. ನಾನು ಗಲಾಟೆ ಮಾಡಿದ್ರೆ ನನ್ನನ್ನು ಬಂಧಿಸಿ. ಈ ಸಂಬಂಧವಾಗಿ ನಾನು ಸುಪ್ರೀಂಕೋರ್ಟ್‍ಗೆ ಹೋಗಿದ್ದೇನೆ. ಬಿಜೆಪಿಯವರಿಗೆ ಸಂವಿಧಾನ, ಸಮಾನತೆ, ಅಂಬೇಡ್ಕರ್ ಯಾವುದರ ಬಗ್ಗೆಯೂ ಗೊತ್ತಿಲ್ಲ ಎಂದು ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದರು.

ಖಾಸಗಿ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಳೆದ ಆರು ವರ್ಷಗಳಿಂದ ನಾನು ಗೋವಾ ರಾಜ್ಯಕ್ಕೆ ಹೋಗದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ನೋಟಿಸ್ ಕಳುಹಿಸುತ್ತಾರೆ. ಹೋಗಲು ಪ್ರಯತ್ನಿಸಿದರೆ ತಮ್ಮ ಅಧಿಕಾರ ಬಳಸಿ ಕಿರುಕುಳ ನೀಡುತ್ತಾರೆ. ನಾವು ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೂ ಜೈಲಿಗೆ ಹೋಗಿದ್ದೇವೆ, ಜೆಡಿಎಸ್ ಇದ್ದಾಗಲೂ ಜೈಲಿಗೆ ಹೋಗಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರವೂ ಜೈಲಿಗೆ ಹೋಗಿದ್ದೇವೆ. ನಮ್ಮಂತ ಹಿಂದೂ ಹೋರಾಟಗಾರರು ಎಲ್ಲ ಪಕ್ಷಗಳು ಅಧಿಕಾರದಲ್ಲಿದ್ದಾಗಲೂ ಜೈಲಿಗೆ ಹೋಗಿದ್ದಾರೆ.

ಇನ್ನು ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ನನ್ನ ಮೇಲೆ 13 ಕೇಸ್‍ಗಳನ್ನು ಹಾಕಿದರು. ವಿಚಿತ್ರ ಎಂದರೆ ಕಾಂಗ್ರೆಸ್ ಸರ್ಕಾರ ನನ್ನ ಮೇಲೆ ಗೂಂಡಾಆಕ್ಟ್ ಹಾಕಲಿಲ್ಲ, ಆದರೆ ಬಿಜೆಪಿಯವ್ರು ನನ್ನ ಮೇಲೆ ಗೂಂಡಾಆಕ್ಟ್ ಹಾಕಿದ್ರು. ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಗೂಂಡಾಆಕ್ಟ್ ಹಾಕಲು ಪ್ರಾರಂಭಿಸಿದ್ದೆ ಬಿಜೆಪಿ. ಆರ್. ಅಶೋಕ ಗೃಹ ಮಂತ್ರಿಯಾಗಿದ್ದಾಗ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಗೂಂಡಾಆಕ್ಟ್ ಹಾಕದಂತೆ ಎಷ್ಟೇ ಮನವಿ ಮಾಡಿದರು ಕೇಳಲಿಲ್ಲ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

Exit mobile version