ಇ- ಭಗವದ್ಗೀತೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ದೆಹಲಿ, ಮಾ. 11: ಭಗವದ್ಗೀತೆ ನಮ್ಮ ಮನಸ್ಸನ್ನು ಮೌಢ್ಯತೆಯಿಂದ ದೂರವಿದ್ದು, ಚಿಂತನೆಗಳಿಂದ ತುಂಬುವಂತೆ ಮಾಡುತ್ತದೆ. ಪ್ರಶ್ನೆ ಮಾಡಲು ನಮಗೆ ಪ್ರೇರೇಪಣೆ ನೀಡುತ್ತದೆ. ಭಗವದ್ಗೀತೆಯ ಪ್ರತಿ ಸಾಲುಗಳೂ ನಮ್ಮ ಮನಸ್ಸನ್ನು ತೆರೆದಿಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಾಖ್ಯಾನಿಸಿದ್ದಾರೆ. ಸ್ವಾಮಿ ಚಿದ್ಭಾವನಾನಂದರ ರಚನೆಯ ಭಗವದ್ಗೀತೆಯ ಇ- ಆವೃತ್ತಿಯನ್ನು ಉದ್ಘಾಟಿಸಿದ ಅವರು, ಆಧುನಿಕ ಜಗತ್ತಿನಲ್ಲಿ ಭಗವದ್ಗೀತೆಯ ಅನಿವಾರ್ಯತೆಯನ್ನು ಉಲ್ಲೇಖಿಸಿದರು.

ಭಗವದ್ಗೀತೆಯನ್ನು ಓದಿ ಅಧ್ಯಯನ ಮಾಡಿ ಪ್ರೇರಣೆ ಹೊಂದಿರುವವರು ತಮ್ಮ ಬದುಕಿನಲ್ಲಿ ಸಹಾನುಭೂತಿ ಹೊಂದಿರುತ್ತಾರೆ. ಅವರು ಮನೋಧರ್ಮದಲ್ಲಿ ಪ್ರಜಾಪ್ರಭುತ್ವವಾದಿ ಅಂಶಗಳನ್ನು ಅನುಸರಿಸುತ್ತಾರೆ. ಇತ್ತೀಚೆಗೆ ಜಗತ್ತಿಗೆ ಅಗತ್ಯವಿದ್ದ ಕೋವಿಡ್ ಔಷಧವನ್ನು ಭಾರತದಿಂದ ಹಲವು ದೇಶಗಳಿಗೆ ರವಾನೆ ಮಾಡಲಾಗಿದೆ. ಇಂತಹ ಭಾರತದಲ್ಲೇ ತಯಾರಿಸಿದ ಔಷಧಗಳನ್ನು ವಿಶ್ವಕ್ಕೆ ನೀಡುವ ಉದಾರ ಬುದ್ಧಿಗೆ, ಭಗವದ್ಗೀತೆ ಕಲಿಸಿದ ಮೌಲ್ಯಗಳೇ ಕಾರಣ. ಈ ಉದಾತ್ತ ಕಾವ್ಯ ನಮಗೆ ಜೀವನ ಪಾಠಗಳನ್ನು ಕಲಿಸುತ್ತದೆ ಎಂದು ಹೇಳಿದರು.

ಭಾರತೀಯ ಯುವಸಮುದಾಯವು ಭಗವದ್ಗೀತೆಯಂಥ ಕೃತಿಗಳನ್ನು ಓದಬೇಕು. ಜನರು ಅದನ್ನು ಹೊಸ ತಲೆಮಾರಿಗೆ ಪರಿಚಯಿಸಬೇಕು. ಸ್ವಾತಂತ್ರ್ಯ ಹೋರಾಟಕ್ಕೆ ಗೀತೆ ಹೇಗೆ ಶಕ್ತಿ ತುಂಬಿತು. ಆಧ್ಯಾತ್ಮಿಕ ಬಂಧನದಲ್ಲಿ ಗೀತೆ ದೇಶವನ್ನು ಹೇಗೆ ಒಟ್ಟಾಗಿರಿಸಿತು ಎಂದು ನಾವು ತಿಳಿಯಬೇಕು. ಅಧ್ಯಯನ ನಡೆಸಬೇಕು, ಬರೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Exit mobile version