ಯುಪಿ ಚುನಾವಣೆಗಾಗಿ ಖಾಸಗಿ ವಾಹಿನಿಯ ಸರ್ವಪಕ್ಷ ಸಮಾವೇಶ: ಸಿಎಂ ಯೋಗಿ, ಮಾಜಿ ಸಿಎಂ ಅಖಿಲೇಶ್, ಅಸದುದ್ದೀನ್ ಓವೈಸಿ ಭಾಗಿ

ಲಕ್ನೋ, ಆ. 08: ಹಿಂದಿ ವಾಹಿನಿ ಆಜ್ ತಕ್ ವತಿಯಿಂದ ನಡೆದ ಸರ್ವಪಕ್ಷ ಸಮಾವೇಶ ‘ಪಂಚಾಯತ್ ಆಜ್ ತಕ್’ ನಲ್ಲಿ ಉತ್ತರಪ್ರದೇಶದ ಎಲ್ಲಾ ಪಕ್ಷಗಳ ಪ್ರಮುಖ ನಾಯಕರು ಭಾಗಿಯಾದರು. ಈ ಕಾರ್ಯಕ್ರಮದಲ್ಲಿ ಹಲವು ದಿಗ್ಗಜ ನಾಯಕರೊಂದಿಗೆ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

ಈ ಬಾರಿ 300ಕ್ಕೂ ಅಧಿಕ ಸೀಟ್ ಬಿಜೆಪಿ ಗೆಲ್ಲಲಿದೆ, ಮೋದಿ-ಶಾ ಜೋಡಿ ಜೊತೆ ಇಡೀ ಯುಪಿ ಇದೆ ಎಂದು ಡಿಸಿಎಂ ಕೇಶವ ಮೌರ್ಯ ಹೇಳಿದರೆ, ಮಾಯಾವತಿಯವರ ಪಕ್ಷ ಬಿ ಎಸ್ ಪಿ ಈ ಬಾರಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ, ಬಿಜೆಪಿ ಧರ್ಮದ ಹೆಸರಲ್ಲಿ ಕೆಟ್ಟ ರಾಜಕಾರಣ ಮಾಡುತ್ತಿದೆ. ಇವರ ಆಡಳಿತದಲ್ಲಿ ಬ್ರಾಹ್ಮಣರ ಹತ್ಯೆಯೂ ನಡೆಯುತ್ತಿದೆ ಎಂದು ಬಿ ಎಸ್ ಪಿಯ ರಾಷ್ಟ್ರೀಯ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾರವರು ಆರೋಪಿಸಿದ್ದಾರೆ.

ಜಲಸಂಪನ್ಮೂಲ ಮಂತ್ರಿ ಮಹೇಂದ್ರ ಸಿಂಗ್, ಬಿಜೆಪಿ ಸರಕಾರವು ಉತ್ತರಪ್ರದೇಶದಿಂದ ರೊಹಿಂಗ್ಯರನ್ನು ಖಂಡಿತವಾಗಿಯೂ ಖಾಲಿ ಮಾಡಿಸುತ್ತದೆ, ಬೇರೆ ಸರಕಾರಗಳು ಬೇಕಾದರೆ ಅವರಿಗೆ ಆಶ್ರಯ ಕೊಟ್ಟುಕೊಳ್ಳಲಿ ಎಂದು ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಹಾಲಿ ಸಿಎಂ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿಗಳಾದ ಕೇಶವ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ, , ರೈತ ನಾಯಕ ರಾಕೇಶ್ ಟಿಕಾಯತ್, ಮಾಜಿ ಸಿಎಂ ಅಖಿಲೇಶ್ ಯಾದವ್, ಏಐಎಂಐಎಂ ನಾಯಕ ಅಸದುದ್ದೀನ್ ಓವೈಸಿ, ಆಪ್ ನ ಸಂಸದ ಸಂಜಯ್ ಸಿಂಗ್, ನಿಷಾದ್ ಪಾರ್ಟಿಯ ಸಂಜಯ್ ನಿಷಾದ್, ಬಿ ಎಸ್ ಪಿಯ ರಾಷ್ಟ್ರೀಯ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ, ಬಿಜೆಪಿ ಸಂಸದ, ಭೋಜ್ಪುರಿ ನಟ ಮನೋಜ್ ತಿವಾರಿ,  ಭೀಮ್ ಆರ್ಮಿ ಪಾರ್ಟಿಯ ಅಧ್ಯಕ್ಷ ಚಂದ್ರಶೇಖರ್ ಆಜಾದ್ ರಾವಣ್ ಸೇರಿ ಹಲವಾರು ಪ್ರಾದೇಶಿಕ ನಾಯಕರೂ ಭಾಗಿಯಾದರು.

Exit mobile version