ರಾಜೀನಾಮೆಗೆ ಸಿದ್ಧ: ರಮೇಶ್ ಜಾರಕಿ ಹೊಳೆ

ಬೆಳಗಾವಿ,ನ.30: ನಾವು ಮಹದಾಯಿ ಯೋಜನೆಯ ಒಂದು ಗೋಡೆ ಮುಟ್ಟಿದ್ದರೂ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ನಾವು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಜಲಸಂಪನ್ಮೂಲ ಖಾತೆ ಸಚಿವ ರಮೇಶ್‌ ಜಾರಕಿ ಹೊಳೆ ತಿಳಿಸಿದ್ದಾರೆ.


ಗ್ರಾಪಂ ಚುನಾವಣೆ ‌ಘೋಷಣೆಯಾಗಿರುವುದರಿಂದ ನಮ್ಮ ಇಲಾಖೆಯ ಸಭೆಯನ್ನು ಮುಂದೂಡಲಾಗಿದೆ. ಅಧಿಕಾರಿಗಳಿಂದ ಕೊರೊನಾ ಸೋಂಕಿನ ಮಾಹಿತಿ ಪಡೆದಿದ್ದೇನೆ. ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ ಎಂದರು.

ಕಾಂಗ್ರೆಸ್‌ನ 43 ಜಿಪಂ ಸದಸ್ಯರ ಪೈಕಿ 22 ಸದಸ್ಯರು ನನ್ನ ಕಂಟ್ರೋಲ್‌ನಲ್ಲಿ ಇದ್ದಾರೆ. ಅದರಲ್ಲಿ ಎಷ್ಟು ಜನ ಬರುತ್ತಾರೋ ಗೊತ್ತಿಲ್ಲ. ಶಂಕರಗೌಡ, ರಮೇಶ ಗೋರಲ ಅವರು ನನ್ನ ಬೆಂಬಲಿಗರು. ಜಿಪಂ ಸದಸ್ಯ ಕೃಷ್ಣಾ ಅನಗೋಳ್ಕರ್ ಯಾಕೆ ರಾಜೀನಾಮೆ ಕೊಟ್ಟರು ಎಂದು ಅರ್ಥ ಆಗಲಿಲ್ಲ ಎಂದು ಹೇಳಿದರು.

ಸಿ.ಪಿ.ಯೋಗೇಶ್ವರ ಅವರಿಗೆ ಸಚಿವ ಸ್ಥಾನ ಕೊಡಿಸಲು ನಾನು ಪ್ರಯತ್ನಿಸುತ್ತೇನೆ. 17 ಜನ ಶಾಸಕರಿಂದ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಿದೆ. ಎಲ್ಲರಿಗೂ ಅಧಿಕಾರ ಸಿಗಬೇಕು. ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಂದ ನಮಗೆ ಅನ್ಯಾಯ ಮಾಡುವುದಿಲ್ಲ ಎನ್ನುವ ವಿಶ್ವಾಸ ಇದೆ. ನಾನು ದೆಹಲಿಗೆ ಹೋಗಿದ್ದು ಇಲಾಖೆಗೆ ಸಂಬಂಧಿಸಿದ ವಿಚಾರಕ್ಕೆ, ನಾನು ಎಂದೂ ಗುಂಪುಗಾರಿಕೆ ಮಾಡಿಲ್ಲವೆಂದು ಸ್ಪಷ್ಟಪಡಿಸಿದರು.

Exit mobile version