ಅನಾರೋಗ್ಯದ ನೆಪವೊಡ್ಡಿ ಎಸ್ಐಟಿ ತನಿಖೆಯಿಂದ ಜಾರಿಕೊಂಡ ರಮೇಶ್ ಜಾರಕಿಹೊಳಿ

ಬೆಂಗಳೂರು, ಎ. 02: ಸಿಡಿ ಪ್ರಕರಣದ ಆರೋಪಿಯಾಗಿರುವ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಶುಕ್ರವಾರ ಎಸ್‌ಐಟಿ ವಿಚಾರಣೆಗೆ ಗೈರಾಗಿದ್ದು, ಜ್ವರ ಎಂದು ಕಾರಣ ನೀಡಿ ವಿಚಾರಣೆಗೆ ಬರದೇ ಜಾರಿಕೊಂಡಿದ್ದಾರೆ.

ರಾಜ್ಯದಲ್ಲಿ ದೊಡ್ಡ ಕೋಲಾಹಲ ಸೃಷ್ಟಿಸಿರುವ ಸಿಡಿ ಪ್ರಕರಣದ ಯಾವುದೇ ಸವಾಲು ಬಂದರೂ ಸ್ವೀಕರಿಸುವುದಾಗಿ ತೊಡೆತಟ್ಟಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸಿಡಿ ಪ್ರಕರಣದ ಯುವತಿ ಪ್ರತ್ಯಕ್ಷವಾಗಿ ಹೇಳಿಕೆ ನೀಡಿದ ನಂತರ ತಮ್ಮ ನಿಲುವಿಗೆ ಉಲ್ಟಾಹೊಡೆದಂತಿದೆ.

ಸದ್ಯ ರಮೇಶ್ ಜಾರಕಿಹೊಳಿಗೆ ಬಂಧನದ ಭೀತಿ ಶುರುವಾಗಿದ್ದು, ಪರಿಣಾಮ ಇಂದು ಬೆಳಗ್ಗೆ ರಮೇಶ್‌ ಅವರನ್ನು ವಿಚಾರಣೆ ನಡೆಸಲು ಎಸ್‌ಐಟಿ ಸಿದ್ಧವಾಗಿತ್ತು. ಆದರೆ, ಮಧ್ಯಾಹ್ನದವರೆಗೂ ವಿಚಾರಣೆಗೆ ಬಂದಿಲ್ಲ. ಅವರ ಪರವಾಗಿ ಎಸ್‌ಐಟಿ ಕಚೇರಿಗೆ ಬಂದಿದ್ದ ವಕೀಲ ಶ್ಯಾಮಸುಂದರ್‌, ರಮೇಶ್‌ ಜಾರಕಿಹೊಳಿ ಅವರು ನೀಡಿದ್ದ ಪತ್ರವೊಂದನ್ನು ಅಧಿಕಾರಿಗೆ ನೀಡಿದ್ದಾರೆ.

ಈ ಪತ್ರದಲ್ಲಿ ನನಗೆ ವಿಪರೀತ ಜ್ವರವಿದೆ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದು, ವೈದ್ಯರು ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆʼ ಎಂದು ಪತ್ರದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ಪತ್ರ ಪಡೆದು ಪರಿಶೀಲನೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು, ಪುನಃ ವಿಚಾರಣೆಗೆ ದಿನಾಂಕ ನಿಗದಿಪಡಿಸಿ ನೋಟಿಸ್ ನೀಡಬೇಕೋ ಅಥವಾ ಬೇರೆ ಕಾನೂನು ಕ್ರಮ ಕೈಗೊಳ್ಳಬೇಕೋ ಎಂಬುದನ್ನು ಯೋಚಿಸುತ್ತಿದ್ದಾರೆ.

ಇತ್ತ ನ್ಯಾಯಾಲಯದ ಎದುರು ಹಾಜರಾಗಿ ಸಿಆರ್‌ಪಿಸಿ 164ರಡಿ ಹೇಳಿಕೆ ನೀಡಿರುವ ಸಂತ್ರಸ್ತೆ, ವಿಚಾರಣೆ ಹಾಗೂ ಮಹಜರು ಪ್ರಕ್ರಿಯೆಗೆ ಸಹಕರಿಸಿದ್ದಾರೆ.

Exit mobile version