ಕರ್ನಾಟಕಕ್ಕೆ ರೆಮ್‌ಡಿಸಿವಿರ್‌, ಆಮ್ಲಜನಕ ಅಗತ್ಯ ಪೂರೈಕೆಗೆ ಕ್ರಮ: ಸಚಿವ ಸದಾನಂದಗೌಡ

ಬೆಂಗಳೂರು, ಏ. 26: ಕರ್ನಾಟಕಕ್ಕೆ ಕೇಂದ್ರದಿಂದ ರೆಮ್‌ಡಿಸಿವಿರ್‌, ಆಮ್ಲಜನಕ ಅಗತ್ಯ ಪೂರೈಕೆಗೆ ಕ್ರಮವಹಿಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.

ಕೋವಿಡ್‌ ನಿರ್ವಹಣೆ ಸಂಬಂಧ ವಿಧಾನಸೌಧದ 313ರ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ರೆಮ್‌ಡಿಸಿವಿರ್‌, ಆಮ್ಲಜನಕ ಅಗತ್ಯ ಪೂರೈಕೆ ಮಾಡಲಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಆರಂಭದಲ್ಲಿ ರೆಮ್‌ಡಿಸಿವಿರ್‌ ಔಷಧ ಹಾಗೂ ಆಮ್ಲಜನಕ ಪೂರೈಕೆಗೆ ಸ್ವಲ್ಪ ಪ್ರಮಾಣದಲ್ಲಿ ಕೊರತೆ ಇತ್ತು. ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಕೇಂದ್ರಕ್ಕೆ ಒತ್ತಡ ತಂದಿದ್ದರು. ಇದೀಗ 1.22 ಲಕ್ಷ ರೆಮ್‌ಡಿಸಿವಿರ್ ಲಭ್ಯವಾಗಲಿದೆ. 800 ಮೆಟ್ರಿಕ್ ಟನ್ ಆಮ್ಲಜನಕ ಕೂಡ ಹೆಚ್ಚುವರಿಯಾಗಿ ನೀಡಲಾಗುವುದು. ಮುಂದಿನ 15 ದಿನಗಳಲ್ಲಿ 1,400 ಮೆಟ್ರಿಕ್ ಟನ್ ಬೇಕು ಅಂತಾ ಹೇಳಿದ್ದಾರೆ. ಆ ಬಗ್ಗೆ ಕ್ರಮವಹಿಸಲಾಗುವುದು ಎಂದರು.

ವಾರಾಂತ್ಯ ಕರ್ಫ್ಯೂ ಮುಂದುವರಿಕೆ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಸಂಪುಟ ಸಚಿವರೊಂದಿಗೆ ಚರ್ಚಿಸಿದ ಬಳಿಕ ಸಿಎಂ ನಿರ್ಧಾರ ಕೈಗೊಳ್ಳಲಿದ್ದಾರೆ. ಅಗತ್ಯವಿದ್ದರೆ ಮುಂದುವರಿಸುತ್ತಾರೆ ಎಂದರು.

ಕೋವಿಡ್‌ ಮೂರನೇ ಅಲೆಗೆ ಹೋಗಬಾರದು ಅಂದರೆ ಎಲ್ಲರೂ ಕೋವಿಡ್‌ ಲಸಿಕೆ ಪಡೆಯಬೇಕು. ಇದು ಎಲ್ಲರ ಜವಾಬ್ದಾರಿ. ಎಲ್ಲರಿಗೂ ಲಸಿಕೆ ನೀಡುವುದು ಸರ್ಕಾರದ ಜವಾಬ್ದಾರಿ. ಕೋವಿಡ್‌ನಿಂದ ಹೆಚ್ಚಿನ ಸಾವು, ನೋವು ಸಂಭವಿಸುತ್ತಿರುವ ಬಗ್ಗೆ ಮನಸ್ಸಿಗೆ ನೋವಾಗಿದೆ. ಜನರು ಇನ್ನಾದರೂ ಜಾಗೃತರಾಗಬೇಕು. ಆಗ ವಾರಾಂತ್ಯ ಕರ್ಫ್ಯೂ ಯಶಸ್ವಿಯಾಗಲಿದೆ ಎಂದರು.

Exit mobile version