ಉಸಿರಾಟದ ಸಮಸ್ಯೆ ಹಿನ್ನೆಲೆ: ರಮೇಶ್ ಜಾರಕಿಹೊಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ; ಸುಳ್ಳು ನೆಪ ಎಂದ ಸಂತ್ರಸ್ತೆ ಪರ ವಕೀಲ

ಬೆಳಗಾವಿ, ಏ. 05: ರಾಸಲೀಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಸಿಲುಕಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಇದೀಗ ಉಸಿರಾಟ ಸಮಸ್ಯೆ ಎದುರಾಗಿದ್ದು, ಅವರನ್ನು ಗೋಕಾಕ್ ತಾಲೂಕು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.
 
ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಮಾ.31ರಂದು ಆಸ್ಪತ್ರೆಗೆ ಆಗಮಿಸಿದ ಸಂದರ್ಭ ಅವರಿಗೆ ಆ್ಯಂಟಿಜನ್ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ದೃಢಪಟ್ಟಿತು. ಚಿಕಿತ್ಸೆ ನೀಡಿ ಅವರನ್ನು ಹೋಮ್ ಕ್ವಾರಂಟೈನಲ್ಲಿರಲು ಕಳುಹಿಸಲಾಗಿತ್ತು. ಆದರೆ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯ್ಲಲಿ ಭಾನುವಾರ ರಾತ್ರಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ರವೀಂದ್ರ ಆಂಟಿನ್ ತಿಳಿಸಿದ್ದಾರೆ.
 
ರಮೇಶ್ ಜಾರಕಿಹೊಳಿ ಅವರಿಗೆ ರಕ್ತದೊತ್ತಡ, ಮಧುಮೇಹ, ಉಸಿರಾಟದ ಸಮಸ್ಯೆ ಇರುವುದು ಕಂಡು ಬಂದಿದೆ. ಅವರ ಕಾರು ಚಾಲಕ ಮತ್ತು ಅಡುಗೆ ಭಟ್ಟನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ನಡುವೆ ರಮೇಶ್ ಜಾರಕಿಹೊಳಿ ಇನ್ನು ಮೂರ್ನಾಲ್ಕು ದಿನ ತೀವ್ರ ನಿಗಾ ಘಟಕದಲ್ಲಿ ಇರಲಿದ್ದಾರೆ ಎಂದರು.

ಕೊರೊನಾ ಸೋಂಕು; ಸುಳ್ಳು ನೆಪ ಎಂದ ವಕೀಲ
ಸಿಡಿ ಪ್ರಕರಣ ಆರೋಪಕ್ಕೆ ಸಿಲುಕಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಕೊರೊನಾ ಸಂಬಂಧ ಆಸ್ಪತ್ರೆಗೆ ದಾಖಲಾಗಿರುವುದು ಸುಳ್ಳು ಎಂದು ಸಂತ್ರಸ್ತೆ ಪರ ವಕೀಲ ಕೆ.ಎನ್‌ ಜಗದೀಶ್‌, ಕೋವಿಡ್‌ ಸುಳ್ಳು ನೆಪ ಹೇಳಿ ವಿಚಾರಣೆಗೆ ಗೈರು ಹಾಜರಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Exit mobile version