ಕೇರಳ ರಾಜಕೀಯದ ಕ್ರಾಂತಿಕಾರಿ ನಾಯಕಿ ಕೆ. ಆರ್.ಗೌರಿಯಮ್ಮ ನಿಧನ

ತಿರುವನಂತಪುರಂ, ಮೇ. 11: ಕೇರಳದ ಕ್ರಾಂತಿಕಾರಿ ನಾಯಕಿ ಕೆ.ಆರ್ ಗೌರಿಯಮ್ಮ (102) ಮಂಗಳವಾರ ಬೆಳಗ್ಗೆ ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಗೌರಿಯಮ್ಮ ಅವರ ಮೃತದೇಹವನ್ನು ಬೆಳಿಗ್ಗೆ 10.45 ಕ್ಕೆ ಅಯ್ಯಂಕಾಳಿ ಹಾಲ್‌ನಲ್ಲಿ (ಹಳೆಯ ವಿಜೆಟಿ ಹಾಲ್) ಸಾರ್ವಜನಿಕ ದರ್ಶನಕ್ಕಿಡಲಾಗಿದೆ. ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಅಂತ್ಯ ಸಂಸ್ಕಾರ ನಡೆಯಲಿದೆ. ಸಿಪಿಎಂ ಮುಖಂಡರಾದ ಎ.ವಿಜಯರಾಘವನ್, ಎಂ. ಎ. ಬೇಬಿ, ವಿ.ಶಿವಂಕುಟ್ಟಿ ಮತ್ತು ಜಿಲ್ಲಾ ಕಾರ್ಯದರ್ಶಿ ಅನವೂರ್ ನಾಗಪ್ಪನ್ ಅಂತಿಮ ನಮನ ಸಲ್ಲಿಸಿ ಅಂತ್ಯ ಸಂಸ್ಕಾರದ ಸಿದ್ಧತೆ ನಡೆಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕಿರಿಸಿ ನಂತರ ಮೃತದೇಹವನ್ನು ಆಲಪ್ಪುಳಕ್ಕೆ ಕೊಂಡೊಯ್ಯಲಾಗುವುದು. ಸಂಜೆ 6 ಗಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದೆ.

ಗೌರಿಯಮ್ಮ ಅವರ ಬದುಕು ಕೇರಳದ ರಾಜಕೀಯ ಇತಿಹಾಸವೂ ಆಗಿತ್ತು. ಕಾನೂನು ಅಧ್ಯಯನ ಮಾಡಿ ವಕೀಲರಾದ ನಂತರ ಗೌರಿಯಮ್ಮ ರಾಜಕೀಯ ಪ್ರವೇಶಿಸಿ ಆಧುನಿಕ ಕೇರಳದ ಇತಿಹಾಸದಲ್ಲಿ ಅನುಭವಿ ರಾಜಕಾರಣಿ ಎಂದೆನಿಸಿಕೊಂಡವರು . ಇಪ್ಪತ್ತೆಂಟನೇ ವಯಸ್ಸಿನಲ್ಲಿ ಕಮ್ಯುನಿಸ್ಟ್ ಪಕ್ಷದ ಸದಸ್ಯತ್ವ ಪಡೆದ ಗೌರಿಯಮ್ಮ ಕೇರಳದ ಇತಿಹಾಸದಲ್ಲಿ ಅತ್ಯಂತ ಅಸಾಧಾರಣ ವ್ಯಕ್ತಿಗಳಲ್ಲಿ ಒಬ್ಬರಾಗಿ ಮಿಂಚಿದರು. ಅವರು ವಿಧಾನಸಭೆಯ ಸದಸ್ಯರಾಗಿ 13 ಬಾರಿ ಆಯ್ಕೆಯಾಗಿದ್ದು ಆರು ಬಾರಿ ಸಚಿವರಾಗಿದ್ದಾರೆ. ಗೌರಿಯಮ್ಮ ಅವರ ಸಾಧನೆಗಳಲ್ಲಿ ಭೂ ಸುಧಾರಣಾ ಕಾಯ್ದೆ ಸೇರಿದಂತೆ ಹಲವಾರು ನಿರ್ಣಾಯಕ ಸಾಧನೆಗಳಿವೆ.

Exit mobile version