ದ್ವಿತೀಯ ಟೆಸ್ಟ್: ಭಾರತದ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ತತ್ತರ: ಕೊಹ್ಲಿ ಪಡೆ ಹಿಡಿತದಲ್ಲಿ ಪಂದ್ಯ

ಚೆನ್ನೈ, ಫೆ. 14: ರವಿಚಂದ್ರನ್ ಅಶ್ವಿನ್(43ಕ್ಕೆ 5) ಹಾಗೂ ಬೌಲರ್​ಗಳ ಸಾಂಘಿಕ ಪ್ರದರ್ಶನದಿಂದ ಪ್ರವಾಸಿ ಇಂಗ್ಲೆಂಡ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಮೂಲಕ ಪ್ರಥಮ ಇನ್ನಿಂಗ್ಸ್​ನಲ್ಲಿ ಭರ್ಜರಿ ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ, ದ್ವಿತೀಯ ಟೆಸ್ಟ್​ನಲ್ಲಿ ಬಿಗಿಹಿಡಿತ ಸಾಧಿಸಿದೆ.

ಇಲ್ಲಿನ ಚೆಪಾಕ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಂ ಇಂಡಿಯಾ, 2ನೇ ದಿನದಾಟದಲ್ಲಿ ಪ್ರಾಬಲ್ಯ ಮೆರೆಯಿತು. ಬೌಲರ್​ಗಳ ಸಾಂಘಿಕ ಪ್ರದರ್ಶನದೊಂದಿಗೆ ಇಂಗ್ಲೆಂಡ್​ ತಂಡವನ್ನು ಮೊದಲ ಇನ್ನಿಂಗ್ಸ್​ನಲ್ಲಿ 134 ರನ್​ಗಳಿಗೆ ಕಟ್ಟಿಹಾಕಿತು. ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ 2ನೇ ದಿನದಂತ್ಯಕ್ಕೆ 1 ವಿಕೆಟ್​ ನಷ್ಟಕ್ಕೆ 54 ರನ್​ಗಳಿಸಿದ್ದು, ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 249 ರನ್​ಗಳ ಭಾರೀ ಮುನ್ನಡೆ ಸಾಧಿಸಿದೆ. ಭಾರತದ ಪರ ರೋಹಿತ್ ಶರ್ಮಾ(ಅಜೇಯ 25) ಹಾಗೂ ಪೂಜಾರ(ಅಜೇಯ 7) ರನ್​ಗಳಿಸಿದ್ದಾರೆ. ಆರಂಭಿಕನಾಗಿ ಕಣಕ್ಕಿಳಿದ ಶುಭ್ಮನ್ ಗಿಲ್(17) ರನ್​ಗಳಿಸಿ ಪೆವಿಲಿಯನ್ ಸೇರಿಕೊಂಡರು.

2ನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ, ರಿಷಭ್ ಪಂತ್(ಅಜೇಯ 67) ರನ್​ಗಳ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ 329 ರನ್​ಗಳಿಸಿತು. ಇಂಗ್ಲೆಂಡ್ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಮೊಯಿನ್ ಅಲಿ(128ಕ್ಕೆ 4), ಸ್ಟೋನ್(47ಕ್ಕೆ 3), ಲೀಚ್ 2 ಹಾಗೂ ರೂಟ್ 1 ವಿಕೆಟ್ ಪಡೆದರು.

ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್​, ಕೊಹ್ಲಿ ಪಡೆಯ ಬೌಲಿಂಗ್ ದಾಳಿಗೆ ತತ್ತರಿಸಿತು. ಇನ್ನಿಂಗ್ಸ್ ಆರಂಭದಿಂದಲೇ ಭಾರತೀಯ ಬೌಲರ್​ಗಳ ಆಕ್ರಮಣಕಾರಿ ಆಟಕ್ಕೆ ಶರಣಾದ ಆಂಗ್ಲರು, ಸತತ ವಿಕೆಟ್​ಗಳನ್ನು ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು. ಫೋಕ್ಸ್​ ಗಳಿಸಿದ 42 ರನ್​ಗಳನ್ನು ಹೊರತುಪಡಿಸಿದರೆ ಉಳಿದ ಯಾವುದೇ ಬ್ಯಾಟ್ಸಮನ್​ಗಳು ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಭಾರತದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಅಶ್ವಿನ್(43ಕ್ಕೆ 5) ವಿಕೆಟ್ ಪಡೆದು ಮಿಂಚಿದರೆ. ಇಶಾಂತ್ ಶರ್ಮಾ(22ಕ್ಕೆ 2), ಅಕ್ಸರ್ ಪಟೇಲ್(40ಕ್ಕೆ 2) ಹಾಗೂ ಸಿರಾಜ್(5ಕ್ಕೆ 1) ವಿಕೆಟ್ ಪಡೆದು ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನೆಲು ಮುರಿದರು. ಪರಿಣಾಮ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ನಲ್ಲಿ 134 ರನ್​ಗಳಿಗೆ ಸರ್ವಪತನ ಕಂಡಿತು.

Exit mobile version