ತಮ್ಮ ಆಸೆಯಂತೆ ದೇಹವನ್ನು ದಾನಮಾಡಿದ ಹಿರಿಯ ನಟಿ ಭಾರ್ಗವಿ ನಾರಾಯಣ್!

bhargavi

ಕನ್ನಡದ ಹಿರಿಯ ನಟಿ ಭಾರ್ಗವಿ ನಾರಾಯಣ್ ಅವರು ಸೋಮವಾರ ತಮ್ಮ ಜಯನಗರದ ನಿವಾಸದಲ್ಲಿ ನಿಧನರಾದರು. ರಂಗಭೂಮಿ ಹಿನ್ನಲೆ ಹೊಂದಿದ್ದ ನಟಿ ಭಾರ್ಗವಿ ಅವರಿಗೆ 84 ವರ್ಷ ವಯಸ್ಸಾಗಿತ್ತು. ಭಾರ್ಗವಿ ಅವರು ಸುಮಾರು 600 ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ ಮತ್ತು ಹಲವಾರು ಕನ್ನಡ ದೂರದರ್ಶನ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಕುಟುಂಬದ ಪ್ರಕಾರ, ಅವರು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಸೋಮವಾರ ಸಂಜೆ 7.30 ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ತಿಳಿಸಿದರು.

ನಟಿ ಭಾರ್ಗವಿ ಅವರು ಹಿರಿಯ ನಟ ಪ್ರಕಾಶ್ ಬೆಳವಾಡಿ ಅವರ ತಾಯಿಯಾಗಿದ್ದರು, ಹಲವು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಗೂ ಭಾಜನರಾಗಿದ್ದರು. ಕನ್ನಡ ಚಿತ್ರರಂಗದ ಯುವ ನಟಿ ಸಂಯುಕ್ತಾ ಹೊರ್ನಾಡ್ ಅವರು ಭಾರ್ಗವಿ ಅವರ ಮೊಮ್ಮಗಳು. ಅಜ್ಜಿಯ ಬಗ್ಗೆ ಮಾತನಾಡಿದ ಸಂಯುಕ್ತಾ ಅವರು “ನನ್ನ ಅಜ್ಜಿ ಇಂದು ಸಂಜೆ 7:30ಕ್ಕೆ ನಿಧನರಾಗಿದ್ದಾರೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. 600ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಲ್ಲದೆ ಕನ್ನಡ ಚಿತ್ರರಂಗದಲ್ಲಿ ಚಿರಪರಿಚಿತ ಮುಖವಾಗಿದ್ದರು. ಭಾರ್ಗವಿ ಅವರು ‘ಮಂಥನ’ ಮತ್ತು ‘ಮುಕ್ತ’ ಎಂಬ ಹಿಟ್‌ ಧಾರವಾಹಿಗಳಲ್ಲಿ ನಟಿಸಿದ್ದಾರೆ.

ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಭಾರ್ಗವಿ ಅವರು ‘ನಾ ಕಂಡ ನಮ್ಮವರು’ ಕೃತಿಯ ಲೇಖಕಿ ಕೂಡ ಹೌದು. ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದ ‘ನಾನು ಭಾರ್ಗವಿ’ (2012) ಎಂಬ ಆತ್ಮಚರಿತ್ರೆಯನ್ನೂ ಬರೆದಿದ್ದಾರೆ. ತಮ್ಮ ನೌಕರರ ರಾಜ್ಯ ವಿಮಾ ನಿಗಮದಲ್ಲಿ ಉದ್ಯೋಗಿಯಾಗಿರುವಾಗಲೂ ರಂಗಭೂಮಿ ಮತ್ತು ಸಿನಿಮಾವನ್ನು ಸರಿದೂಗಿಕೊಂಡು ಹೋದವರು. ಭಾರ್ಗವಿ ಅವರು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರೂ ಆಗಿದ್ದರು. ಅವರ ಆಸೆಯಂತೆ ಕುಟುಂಬದವರು ಅವರ ದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಭಾರ್ಗವಿ ಅವರ ಕಣ್ಣುಗಳನ್ನು ನೇತ್ರಧಾಮ ಸಂಸ್ಥೆಗೆ ದಾನ ಮಾಡಲಾಗಿದೆ.

Exit mobile version