ಆಗಸ್ಟ್​ 11ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಸಂಚಾರ; ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಮೊದಲ ವಿಮಾನ ಹಾರಾಟ

ಶಿವಮೊಗ್ಗ: ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣಗೊಂಡು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಂದ ಲೋಕಾರ್ಪಣೆಗೊಂಡಿರುವ ಶಿವಮೊಗ್ಗದ ನೂತನ ವಿಮಾನ ನಿಲ್ದಾಣವು ಆಗಸ್ಟ್ 11 ರಂದು ಕಾರ್ಯಾರಂಭ ಮಾಡಲಿದೆ. ಶಿವಮೊಗ್ಗ(Shimoga) ಮತ್ತು ಬೆಂಗಳೂರು(Bengaluru) ನಡುವೆ ಮೊದಲ ವಿಮಾನ ಹಾರಾಟ ನಡೆಸಲಿದೆ.

ಇಂಡಿಗೋ(IndiGo) ಅಧಿಕಾರಿಗಳು ಕಳೆದ ವಾರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಬಸ್ ಸೇವೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿದ್ದಾರೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ(B.Y Raghavendra) ವರದಿ ಮಾಡಿದ್ದಾರೆ. ಫೆಬ್ರವರಿ 27 ರಂದು ದೆಹಲಿಯಿಂದ(Delhi) ಶಿವಮೊಗ್ಗಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು.

ಇದನ್ನೂ ಓದಿ : ರಾಜ್ಯದಲ್ಲಿ ಕಾಫಿ, ಟೀ, ತಿಂಡಿ, ಊಟದ ದರ ಹೆಚ್ಚಳ : ಅಕ್ಕಿ ಮತ್ತು ಹಾಲಿನ ದರ ಹೆಚ್ಚಳ ಬಗ್ಗೆಯೂ ಸಿಕ್ಕಿದೆ ಸುಳಿವು

ಶಿವಮೊಗ್ಗ ನಿಲ್ದಾಣಕ್ಕೆ ಪ್ರಥಮ ಬಾರಿಗೆ ಪ್ರಧಾನಿಯವರ ವಿಶೇಷ ವಿಮಾನ ಆಗಮಿಸಿತು. ಇದು ನಮಗೆ ಐತಿಹಾಸಿಕ ಕ್ಷಣ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(B.S Yediyurappa) ಅವರ ಜನ್ಮದಿನದಂದು ವಿಮಾನ ನಿಲ್ದಾಣ ಉದ್ಘಾಟನೆಗೊಂಡಿರುವುದು ನಮಗೂ ಸಂತಸದ ವಿಷಯ ಎಂದು ರಾಘವೇಂದ್ರ ಹೇಳಿದ್ದಾರೆ.

ಮೂಲಗಳ ಪ್ರಕಾರ ಇಂಡಿಗೋ ಶೀಘ್ರದಲ್ಲೇ ಶಿವಮೊಗ್ಗದಿಂದ ದೆಹಲಿ ಮತ್ತು ಮುಂಬೈಗೆ(Mumbai) ವಿಮಾನ ಹಾರಾಟವನ್ನು ಪ್ರಾರಂಭಿಸಲಿದೆ. ಶಿವಮೊಗ್ಗ-ಬೆಂಗಳೂರು ನಡುವಿನ ಪ್ರಯಾಣ ದರದ ಬಗ್ಗೆ ಕೇಳಿದ ಪ್ರಶ್ನೆಗೆ ಸಂಸದರು ಪ್ರತಿ ವ್ಯಕ್ತಿಗೆ 2,500 ರಿಂದ 3,000 ರೂ. ಇರುತ್ತದೆ ಎಂದು ಹೇಳಿದರು.

ವಿಮಾನ ನಿಲ್ದಾಣವು ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಹಾಯ ಮಾಡಲಿದೆ. ಅನೇಕ ಧಾರ್ಮಿಕ ಸ್ಥಳಗಳು ಮತ್ತು ಪ್ರಸಿದ್ಧ ಜೋಗ ಜಲಪಾತ(Jog Falls) ಜಿಲ್ಲೆಯಲ್ಲಿದ್ದು, ಇವುಗಳಿಗೆ ಭೇಟಿ ನೀಡಲು ಪ್ರವಾಸಿಗರಿಗೆ ನೆರವಾಗಲಿದೆ ಎಂದು ಅವರು ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.

ನೆರೆಯ ಜಿಲ್ಲೆಗಳಾದ ಚಿತ್ರದುರ್ಗ(Chitradurga), ದಾವಣಗೆರೆ(Davanagere), ಚಿಕ್ಕಮಗಳೂರು(Chikmagaluru) ಜಿಲ್ಲೆಗಳ ಅಭಿವೃದ್ಧಿಯಲ್ಲಿ ವಿಮಾನ ನಿಲ್ದಾಣ ದೊಡ್ಡ ಪಾತ್ರ ವಹಿಸಲಿದೆ.ವಿಮಾನ ಸೇವೆಯು ಶಿವಮೊಗ್ಗದಿಂದ ಆರಂಭವಾಗುವುದರಿಂದ ಜಿಲ್ಲೆಯ ಕೈಗಾರಿಕಾ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.

ರಶ್ಮಿತಾ ಅನೀಶ್

Exit mobile version