ಕುಟುಂಬ ಸಮೇತ ಮಾಲ್ಡೀವ್ಸ್‌ಗೆ ಹಾರಿದ ಶ್ರೀಲಂಕಾ ಅಧ್ಯಕ್ಷ ; ತುರ್ತು ಪರಿಸ್ಥಿತಿ ಘೋಷಿಸಿದ ಶ್ರೀಲಂಕಾ!

Srilanka

ಶ್ರೀಲಂಕಾ(Srilanka) ಅಧ್ಯಕ್ಷ(President) ಗೋತಬಯ ರಾಜಪಕ್ಸೆ(Gotabaya Rajapakse) ಅವರು ತಮ್ಮ ಸ್ಥಾನದಿಂದ ಕೆಳಗಿಳಿಯುವ ಕೆಲವೇ ಗಂಟೆಗಳ ಮೊದಲು ಬುಧವಾರ ಮುಂಜಾನೆ ದೇಶದಿಂದ ಪಲಾಯನ ಮಾಡಿದರು. ಇದರ ಬೆನ್ನಲ್ಲೇ ಅಧ್ಯಕ್ಷ, ರಾಜಪಕ್ಸೆ, ಅವರ ಪತ್ನಿ ಮತ್ತು ಇಬ್ಬರು ಅಂಗರಕ್ಷಕರನ್ನು ಶ್ರೀಲಂಕಾದ ವಾಯುಪಡೆಯ ವಿಮಾನದಲ್ಲಿ ಮಾಲ್ಡೀವ್ಸ್‌ಗೆ(Maldives) ಹಾರಿದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಶ್ರಿಲಂಕಾದಲ್ಲಿ ಪ್ರತಿಭಟನಕಾರರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಶ್ರೀಲಂಕಾದಲ್ಲಿ ಪ್ರತಿಭಟನೆ ಬುಗಿಲೆದ್ದ ಹಿನ್ನಲೆ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ತಮ್ಮ ಕುಟುಂಬವು ದೇಶದಿಂದ ಸುರಕ್ಷಿತವಾಗಿ ನಿರ್ಗಮಿಸುವವರೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ರಾಜಪಕ್ಸೆ ಸುಳಿವು ನೀಡಿದ ನಂತರ ಈ ಪ್ರತಿಭಟನೆ ಮುನ್ನೆಲೆಗೆ ಬಂದಿದೆ. ಇದಕ್ಕೂ ಮುನ್ನ ಅವರು ಜುಲೈ 13 ರಂದು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಧಿಕಾರಿಗಳಿಗೆ ತಿಳಿಸಿದರು. ಪ್ರಧಾನಿ ಮನೆ ಹೊರಗೆ ಪೊಲೀಸರು ಪ್ರತಿಭಟನಕಾರರ ವಿರುದ್ಧ ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗಿಸಿದ್ದಾರೆ.


ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಮನೆ ಮುಂದೆ ಪೊಲೀಸರು ಹರಸಾಹಸ ಪಟ್ಟು ಲಾಠಿ ಚಾರ್ಜ್ ಮಾಡುತ್ತಿದ್ದಾರೆ. ಪ್ರಧಾನಿ ನಿವಾಸದ ಗೋಡೆಗಳನ್ನು ಹತ್ತಲು ಪ್ರಯತ್ನಿಸುತ್ತಿರುವ ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಸಹ ಪೊಲೀಸರು ಪ್ರಯೋಗಿಸಲು ಮುಂದಾಗಿದ್ದಾರೆ. ಅಧ್ಯಕ್ಷ ಗೋತಬಯ ಮಾಲ್ಡೀವ್ಸ್‌ಗೆ ಪಲಾಯನ ಮಾಡುತ್ತಿದ್ದಂತೆ ಶ್ರೀಲಂಕಾ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಗೋತಬಯ ರಾಜಪಕ್ಸೆ ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ ನಂತರ ಪ್ರತಿಭಟನಾಕಾರರು ದೇಶದ ಪ್ರಮುಖ ನಗರದ ಬೀದಿಗಳನ್ನು ಆಕ್ರಮಿಸಿಕೊಂಡಿದ್ದರಿಂದ ಶ್ರೀಲಂಕಾ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಸದ್ಯ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಪ್ರತಿಭಟನೆಗಳನ್ನು ನಿಯಂತ್ರಿಸಲು ಕಠಿಣವಾಗುತ್ತಿದೆ.

Exit mobile version