ಬಿ.ಸಿ ನಾಗೇಶ್ ಇನ್ನೂ ಸ್ಥಾನದಲ್ಲಿ ಮುಂದುವರೆದ್ರೆ `ಲಜ್ಜೆಗೆಟ್ಟವರು’ ಎನ್ನಿಸಿಕೊಳ್ಳುತ್ತಾರೆ : ರಾಜ್ಯ ಕಾಂಗ್ರೆಸ್

Congress

ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಸಾಕಷ್ಟು ಗೊಂದಲಗಳನ್ನು ಹುಟ್ಟುಹಾಕಿತ್ತು. ರಾಜ್ಯ ಸರ್ಕಾರ(State Government) ತೆಗೆದುಕೊಂಡ ಪಠ್ಯಪುಸ್ತಕ ಪರಿಷ್ಕರಣೆ ವ್ಯವಸ್ಥೆಯನ್ನು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ಹಾಗೂ ವಿರೋಧ ವ್ಯಕ್ತಪಡಿಸಿದ ಹಿನ್ನಲೆ ರೋಹಿತ್ ಚಕ್ರತೀರ್ಥ(Rohith Chakratheertha) ಅಧ್ಯಕ್ಷತೆಯ ಸಮಿತಿ ನೀಡಿದ ವರದಿಯನ್ನು ಮರು ಪರಿಷ್ಕರಣೆ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿತು.

ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯು ಪರಿಷ್ಕರಿಸಿರುವ ಪಠ್ಯಪುಸ್ತಕಗಳನ್ನು ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿ ನಾಡಿನಾದ್ಯಂತ ಬೃಹತ್ ಪ್ರತಿಭಟನೆ, ಚಳುವಳಿಗಳು ನಡೆದವು. ಕನ್ನಡ ಪರ ಸಂಘಟನೆಗಳು, ಕಾಂಗ್ರೆಸ್ ರಾಜ್ಯಾಧ್ಯಕ್ಷ(Congress State President) ಡಿ.ಕೆ ಶಿವಕುಮಾರ್(DK Shivkumar) ಹಾಗೂ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಹೆಚ್.ಡಿ ದೇವೇಗೌಡರು(HD Devegowda) ಪ್ರತಿಭಟನೆಯಲ್ಲಿ ಭಾಗಿಯಾಗಿ ಪಠ್ಯಪುಸ್ತಕ ಪರಿಷ್ಕರಣೆಯನ್ನು ಖಂಡಿಸಿ ವಿರೋಧಿಸಿದರು.

ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರನ್ನು ತೆಗೆದುಹಾಕಿ ಎಂದು ಪ್ರತಿಭಟನೆಗೂ ಮುನ್ನವೇ ಆಗ್ರಹಿಸಿತ್ತು. ಕಾಂಗ್ರೆಸ್ ಪಕ್ಷ, ರಾಜ್ಯ ಬಿಜೆಪಿ ಸರ್ಕಾರ ಹಾಗೂ ಶಿಕ್ಷಣ ಸಚಿವ ಬಿ.ಸಿ ನಾಗೇಶ್(BC Nagesh) ಅವರನ್ನು ಪ್ರಶ್ನಿಸುವ ಮುಖೇನ ಕಾಲೆಳೆದಿತ್ತು. ರಾಷ್ಟ್ರಕವಿ ಕುವೆಂಪು(RashtraKavi Kuvempu) ಅವರಿಗೆ ಅವಮಾನಿಸಿದವರನ್ನು ಹೇಗೆ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದೀರಾ? ನಿಮ್ಮ ರಾಜೀನಾಮೆ ಇಂದೇ ಆಗಬೇಕು ಎಂದು ಪಟ್ಟುಹಿಡಿದಿತ್ತು.

ಅದರಂತೆಯೇ, ರಾಜ್ಯ ಕಾಂಗ್ರೆಸ್ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ವಿರುದ್ಧ ಟ್ವೀಟ್ ಮಾಡಿದ್ದು, “ಅಲ್ಲೊಂದು ಇಲ್ಲೊಂದು ಲೋಪಗಳನ್ನು ಸರಿಪಡಿಸುವುದರಲ್ಲಿ ಅರ್ಥವೇ ಇಲ್ಲ, ಇಡೀ ಪಠ್ಯಪುಸ್ತಕಗಳನ್ನೇ ವಾಪಸ್ ಪಡೆದು ಹಳೆಯ ಪಠ್ಯವನ್ನು ಮುಂದುವರಿಸುವುದು ಮಾತ್ರ ಪರಿಹಾರ. ಇಷ್ಟೆಲ್ಲಾ ಆದ್ರೂ, ಶಿಕ್ಷಣ ಸಚಿವರೂ ಇನ್ನೂ ಸ್ಥಾನದಲ್ಲಿ ಮುಂದುವರೆದರೆ `ಲಜ್ಜೆಗೆಟ್ಟವರು’ ಎನಿಸಿಕೊಳ್ಳುತ್ತಾರೆ. ಕೂಡಲೇ ರಾಜೀನಾಮೆ ಕೊಟ್ಟು ಜನತೆಯ ಕ್ಷಮೆ ಕೇಳಲಿ” ಎಂದು ಹೇಳಿದೆ.

Exit mobile version